ಹಬೀಬರ ಅನುರಾಗಿಣಿ
ನೂರಾ: ಕಪ್ಪು ಹಿಜಾಬಿನೊಳಗಿನ ನೊಂದ ಜೀವದ ಕಥೆ.
5/13/20261 min read


ನೂರಾ ಪೂರ್ಣ ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸಿದಾಗ, ಅಲ್ಲಿಯವರೆಗೆ ಗದ್ದಲದಿಂದ ಕೂಡಿದ್ದ ತರಗತಿ ಒಮ್ಮೆಲೇ ನಿಶಬ್ದವಾಯಿತು. ತರಗತಿಯಲ್ಲಿದ್ದ ಎಂಬತ್ತಕ್ಕೂ ಹೆಚ್ಚು ಕಣ್ಣುಗಳು ಅವಳ ಕಪ್ಪು ಹಿಜಾಬಿನ ಮೇಲೆ ಒಂದು ಓಟಪ್ರದಕ್ಷಿಣೆ ನಡೆಸಿದವು. ತಿರಸ್ಕಾರದಿಂದ ಕೂಡಿದ ಕೆಲವರು ತಕ್ಷಣವೇ ಮುಖ ತಿರುಗಿಸಿ, "ಇದೇನು ಕೋಲವಪ್ಪಾ..." ಎಂದು ಹಾಸ್ಯದ ರೂಪದಲ್ಲಿ ಸನ್ನೆ ಮಾಡಿದರು. ಅವಳು ಕುಳಿತುಕೊಂಡಾಗ ಪಕ್ಕದಲ್ಲಿದ್ದ ಹುಡುಗಿ ಭಯದಿಂದ ಸ್ವಲ್ಪ ಪಕ್ಕಕ್ಕೆ ಸರಿದಳು.
"ಯಾರಪ್ಪಾ ಈ ಮರಭೂತ?" ಎಂದು ಹಿಂದಿನ ಬೆಂಚಿನಿಂದ ಯಾರೋ ಕೂಗಿ ಕೇಳಿದಾಗ ಇಡೀ ತರಗತಿ ಅವಳನ್ನು ನೋಡಿ ನಕ್ಕಿತು.
ಪರಿಹಾಸದ ಚುಚ್ಚುಮಾತುಗಳು ಮತ್ತು ದ್ವೇಷದ ನೋಟಗಳು ಅವಳ ಮನಸ್ಸನ್ನು ಘಾಸಿಗೊಳಿಸಿದವು. ಬ್ಯಾಗ್ ತುಂಬಾ ತುಂಬಿದ ದುಃಖದೊಂದಿಗೆ ಅಂದು ಅವಳು ಕಾಲೇಜಿನಿಂದ ಮನೆಗೆ ಮರಳಿದಳು.
ಮನೆಗೆ ತಲುಪಿದ ಅವಳು ನೇರವಾಗಿ ಕೋಣೆಗೆ ಹೋಗಿ ಬಾಗಿಲು ಹಾಕಿ, ಹಾಸಿಗೆಯ ಮೇಲೆ ಮುಖ ಹೂತು ಬಿಕ್ಕಿ ಬಿಕ್ಕಿ ಅತ್ತಳು. ತುಂಬ ಹೊತ್ತು ಅತ್ತ ಮೇಲೆ ಅವಳ ಮನಸ್ಸಿಗೆ ಸ್ವಲ್ಪ ಸಮಾಧಾನವೆನಿಸಿತು.
ಅವಳು ಹಾಸಿಗೆಯಿಂದ ಎದ್ದು ಗೋಡೆಗೆ ಒರಗಿಸಿಟ್ಟಿದ್ದ ಮೇಜಿನ ಕನ್ನಡಿಯ ಮುಂದೆ ಹೋಗಿ ಕುಳಿತಳು. ಕಾಲೇಜಿನಿಂದ ಬಂದಂತೆಯೇ ಮಲಗಿದ್ದರಿಂದ ಅಲ್ಲಲ್ಲಿ ಸುಕ್ಕುಗಟ್ಟಿದ್ದ ಆ ಕಪ್ಪು ಹಿಜಾಬಿನಲ್ಲಿ ಮುಚ್ಚಿದ ಅವಳ ದೇಹವು ಅವಳ ಎದುರಿಗೇ ಮೌನವಾಗಿ ಪ್ರತಿಫಲಿಸಿತು.
ಹಠಾತ್ತನೆ ಅವಳ ಫೋನ್ ಶಬ್ದ ಮಾಡಿತು. ವಾಟ್ಸಾಪ್ ಗ್ರೂಪ್ ಮೆಸೇಜ್ ಬಂದಿತ್ತು. ಪ್ರವಾದಿ (ಸ.ಅ) ಅವರ ಬಗ್ಗೆ ಕೀರ್ತನೆಗಳನ್ನು ಹಂಚಿಕೊಳ್ಳಲು ತಯಾರಿಸಿದ ಗ್ರೂಪ್ ಅದಾಗಿತ್ತು. ಅವಳು ಮೆಸೇಜ್‌ಗಳನ್ನು ಸ್ಕ್ರಾಲ್ ಮಾಡಿ ಓದಿದಳು.
"ಮದೀನಾದ ಜನ್ನತುಲ್ ಬಖೀಅ್‌ನ ಸಮೀಪದಲ್ಲಿ ಪ್ರವಾದಿ (ಸ.ಅ) ಮತ್ತು ಸಹಾಬಾಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಸೂರ್ಯನು ಕೆಂಬಣ್ಣಕ್ಕೆ ತಿರುಗುತ್ತಾ ಮುಳುಗಲಾರಂಭಿಸಿದ್ದಾನೆ. ಜನ್ನತುಲ್ ಬಖೀಅ್‌ನ ಮೈದಾನದಲ್ಲಿ ಹರಡಿಕೊಂಡಿರುವ ಸಮಾಧಿ ಕಲ್ಲುಗಳ ಕಡೆಗೆ ಚಿಂತಾಮಗ್ನರಾಗಿ ನೋಡಿದ ನಂತರ ಹಬೀಬರು ಮೆಲುದನಿಯಲ್ಲಿ ಹೇಳಿದರು:
"ನನಗೆ ನನ್ನ ಸಹೋದರರನ್ನು ನೋಡಬೇಕು."
ನಬಿಯವರ ಪಕ್ಕದಲ್ಲೇ ನಿಂತಿದ್ದ ಸಹಾಬಿಗಳು ಇದನ್ನು ಕೇಳಿ ಆಶ್ಚರ್ಯಚಕಿತರಾದರು. ಅವರು ಪ್ರಶ್ನಿಸಿದರು:
"ಅಲ್ಲ ನಬಿಯೇ..., ನಾವಲ್ಲವೇ ನಿಮ್ಮ ಸಹೋದರರು...?"
ಅಲ್ಲಿದ್ದ ಎಲ್ಲರನ್ನೂ ಪ್ರೀತಿಯಿಂದ ಒಮ್ಮೆ ನೋಡಿದ ನಂತರ ಪ್ರವಾದಿಯರು ಮಂದಹಾಸ ಬೀರುತ್ತಾ ಮೆಲ್ಲನೆ ಹೇಳಿದರು:
"ನೀವು ನನ್ನ ಸಹಾಬಿಗಳು,ಆದರೆ ನನ್ನ ಸಹೋದರರಲ್ಲ. ನನ್ನ ಸಹೋದರರು ಇದುವರೆಗೆ ಜನಿಸಿಲ್ಲ. ಅವರು ಕೊನೆಯ ಕಾಲದ ಹತ್ತಿರ ಜನಿಸುವವರು. ಅವರಿಗೆ ನನ್ನನ್ನು ನೋಡಬೇಕೆಂಬ ತೀವ್ರ ಹಂಬಲವಿರುತ್ತದೆ, ಆದರೆ ನನ್ನನ್ನು ಕಾಣಲು ಅವರಿಗೆ ಸಾಧ್ಯವಾಗುವುದಿಲ್ಲ. ನನ್ನನ್ನು ಕೇವಲ ಒಂದು ನೋಟ ನೋಡಲು ಅವರು ಏನನ್ನು ಬೇಕಾದರೂ ತ್ಯಜಿಸಲು ಸಿದ್ಧರಿರುತ್ತಾರೆ. ಆದರೂ, ಅವರಿಗೆ ನನ್ನನ್ನು ಅಥವಾ ನನಗೆ ಅವರನ್ನು ಈ ಪ್ರಪಂಚದಲ್ಲಿ ನೇರವಾಗಿ ನೋಡುವ ಅವಕಾಶವಿರುವುದಿಲ್ಲ."
ಇದನ್ನು ಹೇಳುವಾಗ ಪ್ರವಾದಿಗಳ ಮುಖದಲ್ಲಿ ಸಣ್ಣದೊಂದು ಬೇಸರ ಕಾಣಿಸಿತು. ನೂರಾಳ ಮನಸ್ಸು ಅದನ್ನು ಗಮನಿಸಿ ಮರುಗಿತು.
ತದನಂತರ ಹಬೀಬ್ ಮತ್ತೊಂದು ಮಾತನ್ನು ಸೇರಿಸಿದರು. ಅದನ್ನು ಓದಿದಾಗ ಅವಳ ಕಣ್ಣುಗಳು ಹನಿಯೊಡೆದವು.
"ಸಹಾಬಿಗಳೇ... ಅವರಲ್ಲಿ ಒಬ್ಬನ ಸತ್ಕರ್ಮದ ಮೌಲ್ಯವು ನಿಮ್ಮಲ್ಲಿನ ಐವತ್ತು ಜನರ ಸತ್ಕರ್ಮದ ಮೌಲ್ಯಕ್ಕೆ ಸಮನಾಗಿರುತ್ತದೆ."
ಆಶ್ಚರ್ಯಚಕಿತರಾದ ಸಹಾಬಿಗಳು ತಮ್ಮ ಸಂಶಯವನ್ನು ತೀರಿಸಿಕೊಳ್ಳಲು ಹಬೀಬರನ್ನು ಮತ್ತೆ ಕೇಳಿದರು:
"ನಮ್ಮಲ್ಲಿನ ಐವತ್ತು ಜನರು ಅವರಿಗೆ ಸಮಾನವೆಂದೋ ಅಥವಾ ಅವರಲ್ಲಿನ ಐವತ್ತು ಜನರು ನಮಗೆ ಸಮಾನವೆಂದೋ ನೀವು ಉದ್ದೇಶಿಸಿದ್ದು!?"
ನಬಿಯವರು ಯಾವುದೇ ಸಂಶಯವಿಲ್ಲದೆ ಮರು ಉತ್ತರ ನೀಡಿದರು:
"ನಿಮ್ಮಲ್ಲಿರುವ ಐವತ್ತು ಜನರ ಸತ್ಕರ್ಮಗಳು ಅವರಲ್ಲಿನ ಕೇವಲ ಒಬ್ಬ ವ್ಯಕ್ತಿಯ ಸತ್ಕರ್ಮಕ್ಕೆ ಸಮನಾಗಿರುತ್ತದೆ."
ಇನ್ನೂ ಸಂಶಯದಿಂದ ನೋಡುತ್ತಿದ್ದ ಸಹಾಬಿಗಳಿಗೆ ಹಬೀಬ್ ವಿವರಿಸಿದರು:
"ಸಹಾಬಿಗಳೇ, ಅದರ ಕಾರಣವೇನೆಂದು ನಿಮಗೆ ತಿಳಿದಿದೆಯೇ? ನೀವು ಒಳಿತು ಮಾಡಲು ಸಾಧ್ಯವಿರುವ ಸುಲಭದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೀರಿ. ಒಬ್ಬರಿಗಿಂತ ಒಬ್ಬರು ಒಳ್ಳೆಯದನ್ನು ಮಾಡಲು ಸ್ಪರ್ಧಿಸುತ್ತಿದ್ದೀರಿ. ಆದರೆ ಅವರು ಬದುಕುವ ಕಾಲವು ಕೆಡುಕುಗಳು ತುಂಬಿರುವ ಕಾಲವಾಗಿರುತ್ತದೆ. ಸನ್ಮಾರ್ಗದಲ್ಲಿ ನಡೆಯುವವರನ್ನು ಸಮಾಜವು ಒಂಟಿ ಮಾಡುವ ಕಾಲವದು. ಆದುದರಿಂದಲೇ, ನೀವು ಮಾಡುವ ಕೆಲಸಕ್ಕೆ ಸಿಗುವ ಪ್ರತಿಫಲಕ್ಕಿಂತ ಐವತ್ತು ಪಟ್ಟು ಹೆಚ್ಚಿನ ಪ್ರತಿಫಲ ಅವರಿಗೆ ಸಿಗುತ್ತದೆ." ಪ್ರವಾದಿ (ಸ) ಇಷ್ಟು ಹೇಳಿ ಸುಮ್ಮನಾದರು.