"ಅಲಿ ಫಾತಿಮಾ" ಭಾಗ-02
ಪ್ರಣಯದ ಸಾಲುಗಳು
Haneef Baqavi
6/22/20261 min read


Page 11
ಅದು ಕತ್ತಲಾವರಿಸಿದ ಮರಳುಗಾಡು; ಶಾಪಗ್ರಸ್ತ ಜನ್ಮಗಳೂ ಜನ್ಮತಾಳಿದ ಭೂಮಿ. ಗೋತ್ರ ವೈಷಮ್ಯಗಳು ಉತ್ತುಂಗದಲ್ಲಿದ್ದ ಆ ಕಾಲದಲ್ಲಿ, ಬಲಶಾಲಿಯಾದವನು ದುರ್ಬಲನನ್ನು ಹೊಡೆದು ಗೆದ್ದು ಅಧಿಪತಿಯಾಗುತ್ತಿದ್ದ ಮಕ್ಕಾ ನಗರವದು. ದುರ್ಬಲರ ಮೇಲೆ ಆಯುಧಗಳ ಬಲದಿಂದ ಶಕ್ತರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ್ದರು. ಕೌಟುಂಬಿಕ ಹಿರಿಮೆ ಹಾಗೂ ಕುಲದ ಮಹಿಮೆಯನ್ನು ಹಾಡಿ ಹೊಗಳುತ್ತಾ ಬದುಕುತ್ತಿದ್ದ ಉನ್ಮತ್ತರ ಸಮಾಜವದು. ಆ ಮಕ್ಕಾ ನಗರದ ಪ್ರಮುಖ ನಾಯಕರಾಗಿದ್ದರು ಅಬೂತ್ವಾಲಿಬ್. ಪವಿತ್ರವಾದ ಕಅಬಾದ ಸಮೀಪದಲ್ಲೇ ಅವರ ವಾಸ್ತವ್ಯವಿತ್ತು. ಕಅಬಾದ ಸಂರಕ್ಷಣೆಯಲ್ಲಿ ಹಾಗೂ ಸಾಮಾಜಿಕ ಜವಾಬ್ದಾರಿಗಳು ಈ ರೀತಿಯ ಪ್ರಧಾನ ಕೊಡುಗೆಗಳನ್ನು ನೀಡಿದ ಮಹಾನ್ ವ್ಯಕ್ತಿ ಅವರಾಗಿದ್ದರು.
ಅಬೂತ್ವಾಲಿಬರ ಪ್ರೀತಿಯ ನಿಧಿಯಾಗಿದ್ದ ಪತ್ನಿಯೇ ಫಾತಿಮಾ. ಫಾತಿಮಾ ಅವರು ಆಗಾಗ್ಗೆ ಪವಿತ್ರ ಕಅಬಾವನ್ನು ಭೇಟಿ ಮಾಡುತ್ತಿದ್ದರು. ಅಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವುದು, ಅದರ ಆರೈಕೆ ಮತ್ತು ಪಾಲನೆಯಲ್ಲಿ ತೊಡಗಿಸಿಕೊಳ್ಳುವುದು ಅವರ ನಿತ್ಯಕರ್ಮಗಳ ಒಂದು ಭಾಗವೇ ಆಗಿತ್ತು.
ಅಂದು ವರ್ತಕರ ತಂಡಗಳು ಸಿರಿಯಾ ಮತ್ತು ಮಿಸ್ರ್ ದೇಶಗಳನ್ನು ಗುರಿಯಾಗಿಸಿಕೊಂಡು ವ್ಯಾಪಾರಕ್ಕಾಗಿ ಹೊರಡುತ್ತಿದ್ದ ಕಾಲವಾಗಿತ್ತು. ಮರಳುಗಾಡಿನಿಂದ ಸಂಗ್ರಹಿಸಿದ ವಸ್ತುಗಳೊಂದಿಗೆ ಸುದೀರ್ಘ ದೂರದ ಪ್ರದೇಶಗಳಿಗೆ ತಿಂಗಳುಗಟ್ಟಲೆ ಪ್ರಯಾಣ ಬೆಳೆಸುತ್ತಿದ್ದರು. ಅಲ್ಲಿ ತಾವು ತಂದ ವಸ್ತುಗಳನ್ನು ಮಾರಿ, ಬದಲಿಗೆ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಿ ತರುತ್ತಿದ್ದರು. ಅದೇ ಮಕ್ಕಾದ ಜನರ ಪ್ರಧಾನ ವರಮಾನದ ಮಾರ್ಗವಾಗಿತ್ತು. ಅಬೂತ್ವಾಲಿಬರು ಗರ್ಭಿಣಿಯಾಗಿದ್ದ ತಮ್ಮ ಪತ್ನಿ ಫಾತಿಮಾ ಅವರನ್ನು ಮಕ್ಕಾದಲ್ಲೇ ಬಿಟ್ಟು, ದೂರದ ದೇಶಕ್ಕೆ ವ್ಯಾಪಾರಿ ತಂಡದೊಂದಿಗೆ ಪ್ರಯಾಣ ಬೆಳೆಸಿದರು. ಅದು ತಿಂಗಳುಗಟ್ಟಲೆ ಸುದೀರ್ಘವಾಗಿ ಸಾಗುವ ಪ್ರಯಾಣವಾಗಿತ್ತು. ಪೂರ್ಣ ಗರ್ಭಿಣಿಯಾಗಿದ್ದ ಫಾತಿಮಾ ಅವರು ದಿನಾಲೂ ತಮ್ಮ ಪತಿಯ ಬರುವಿಕೆಗಾಗಿ ಕಾಯುತ್ತಿದ್ದರು. ಗರ್ಭಾವಸ್ಥೆಯಲ್ಲಿದ್ದ ಆ ದಿನಗಳಲ್ಲಿ ಉಳಿದೆಲ್ಲಾ ಸ್ತ್ರೀಯರಂತೆ ಅವರು ಕೂಡ ತನ್ನ ಪತಿಯ ಸಾಮೀಪ್ಯವನ್ನು, ಆಸರೆಯನ್ನು ಬಯಸಿದ್ದರು. ದಿನಗಳು ಉರುಳುತ್ತಾ ಸಾಗಿದವು, ವ್ಯಾಪಾರದ ಲಾಭದೊಂದಿಗೆ,
Page : 12
ಮರಳುಗಾಡಿನ ಪರ್ವತವನ್ನು ದಾಟಿ ತನ್ನ ಪ್ರಿಯತಮ ಬರದಿರುವ ನಿರಾಸೆ ಫಾತಿಮಾರಲ್ಲಿ ಆವರಿಸಿತ್ತು. ನೋವು ತುಂಬಿದ ಆ ರಾತ್ರಿಗಳಲ್ಲಿ ಫಾತಿಮಾ ತನ್ನ ನಿತ್ಯದ ವಾಡಿಕೆಯಂತೆ ಆಗಾಗ್ಗೆ ಕಾಬಾಲಯಕ್ಕೆ ಭೇಟಿ ನೀಡುತ್ತಿದ್ದರು.
ಆತ್ಮ ಸಂಘರ್ಷದ ಆ ರಾತ್ರಿ-ಹಗಲುಗಳು ಕಳೆದು ಹೋದವು. ಒಂದು ದಿನ ಪವಿತ್ರ ಕಅಬಾದಿಂದ ಮಗುವೊಂದರ ಅಳುವಿನ ಧ್ವನಿ ಕೇಳಿಸಿತು. ಆ ಸುದ್ದಿ ಮಕ್ಕಾ ನಗರದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಪವಿತ್ರ ಕಅಬಾದಲ್ಲಿ ಫಾತಿಮಾ ಪ್ರಸವವೇದನೆಯನ್ನು ಅನುಭವಿಸಿ, ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಯಾವುದೇ ಸುದ್ದಿಯ ಅರಿವಿಲ್ಲದೆ ಅಬೂತ್ವಾಲಿಬರು ವರ್ತಕರ ತಂಡದೊಂದಿಗೆ ದೂರದ ದೇಶದಲ್ಲಿದ್ದರು. ಪವಿತ್ರ ಕಅಬಾದ ಒಳಗೆ ಗಂಡು ಮಗು ಜನಿಸಿದ್ದಕ್ಕೆ ಫಾತಿಮಾ ಅಪಾರವಾಗಿ ಸಂತೋಷಪಟ್ಟರು. ಶಕ್ತಿಶಾಲಿಗಳು ಮಾತ್ರವೇ ಪ್ರಾಮುಖ್ಯತೆ ಪಡೆಯುತ್ತಿದ್ದ ಆ ಸಮಾಜದಲ್ಲಿ, ತನ್ನ ಮಗನೂ ಧೀರನಾಗಿ ಬೆಳೆಯಬೇಕೆಂದು ಫಾತಿಮಾ ಆಶಿಸಿದರು.
ಅವರು ಮಗನಿಗೆ 'ಅಸದ್' ಎಂದು ಹೆಸರಿಟ್ಟರು.
ಸಿಂಹ ಎಂಬ ಅರ್ಥವನ್ನು ನೀಡುವ 'ಅಸದ್' ಎಂಬ ಹೆಸರಿಟ್ಟು, ಆ ತಾಯಿ ಸಂತೋಷದಿಂದ ತನ್ನ ಮಗನನ್ನು ಬೆಳೆಸತೊಡಗಿದಳು. ದಿನಗಳು ಉರುಳಿದವು; ಸುಧೀರ್ಘವಾದ ವ್ಯಾಪಾರ ಪ್ರವಾಸವನ್ನು ಮುಗಿಸಿ ಮಕ್ಕಾಗೆ ಮರಳಿದ ಅಬೂತ್ವಾಲಿಬರನ್ನು ಕಾಯುತ್ತಿತ್ತು ಆ ಆನಂದದ ಸುದ್ದಿ. ಪತ್ನಿ ಪ್ರಸವಿಸಿದ್ದಾಳೆ, ಹುಟ್ಟಿರುವುದು ಗಂಡು ಮಗು.
ಅತೀವ ಸಂತೋಷದಿಂದ ಮನೆಗೆ ಧಾವಿಸಿದ ಅಬೂತ್ವಾಲಿಬರು ಪತ್ನಿಯನ್ನು ಹತ್ತಿರಕ್ಕೆ ಕರೆದು, ಮಗುವನ್ನು ದಿಟ್ಟಿಸಿ ನೋಡಿದರು. ಆತ್ಮನಿರ್ವೃತ್ತಿಯ ಆ ಕ್ಷಣಗಳಲ್ಲಿ ಅವರು ತಮ್ಮ ಪತ್ನಿಯ ಬಳಿ ಕೇಳಿದರು:
"ಹೆಸರಿಟ್ಟೆಯಾ?"
"ಅಸದ್ ಎಂದು ಕರೆದಿದ್ದೇನೆ..." ಫಾತಿಮಾ ಉತ್ತರಿಸಿದರು.
ಆದರೆ, ಅಬೂತ್ವಾಲಿಬರಿಗೆ ಆ ಹೆಸರು ಅಷ್ಟು ಇಷ್ಟವಾಗಲಿಲ್ಲ. ಅಬೂ ತ್ವಾಲಿಬರು ತಮ್ಮ ಮಗನಿಗೆ 'ಅಲಿ' ಎಂದು ಹೆಸರಿಟ್ಟರು. ಇತಿಹಾಸದ ಪುಟಗಳಲ್ಲಿ ಜ್ವಲಿಸಿ ನಿಲ್ಲುವ ಒಂದು ಧೀರ ನಾಮ ಜನ್ಮ ತಾಳಿತ್ತು.
ಮುಂದುವರಿಯುವುದು.....