"ಅಲಿ ಫಾತಿಮಾ"
ಪ್ರಣಯದ ಸಾಲುಗಳು
Haneef Baqavi
6/22/20261 min read


Page 09
ಒಂದು ಸ್ನೇಹದ ಕಥೆಯನ್ನು ಹೇಳುತ್ತಾ ಶುರು ಮಾಡೋಣ. ಒಂದು ಪುಟ್ಟ ಕಥೆ.
ಅದು ಪ್ರಕಾಶ ಪರ್ವತ. ಬೆಳಕು ತಪಸ್ಸು ಮಾಡುತ್ತಿರುವ ಹೀರಾ ಗುಹೆ. ಒಂದು ದಿನ ಜಿಬ್ರೀಲರ ಆಗಮನದಿಂದ ಆ ಗುಹೆಯ ಮುಖವು ರೋಮಾಂಚನಗೊಂಡಿತು. ತಪಸ್ಸಿನಲ್ಲಿದ್ದ ರಸೂಲರ ಕಿವಿಯಲ್ಲಿ ದೇವವಾಣಿಯ ಮೊದಲ ವಾಕ್ಯಗಳು ಅನುರಣಿಸಿದವು.
ಅದು ಮೊದಲ ಅನುಭವ.
ಪ್ರವಾದಿಯವರು ಭಯದಿಂದ ನಡುಗಿದರು.
ಹೀರಾ ಬೆಟ್ಟದಿಂದ ಅವರು ಓಡಿ ಬಂದದ್ದು ತಮ್ಮ ಪ್ರೀತಿಯ ಖದೀಜಾರ ಮಡಲನ್ನು ಅರಸುತ್ತಾ.
"ನನ್ನನ್ನು ಹೊದಿಸು... ನನ್ನನ್ನು ಹೊದಿಸು...
ನನ್ನ ದೇಹದ ನಡುಕ ಆರುವಂತೆ ನನ್ನನ್ನು ಅಪ್ಪಿಕೋ ಖದೀಜಾ..."
ದೈವಿಕ ಕರೆಯನ್ನು ಕೇಳಿದ ಪ್ರವಾದಿಯವರಿಗೆ ಆಶ್ರಯ ನೀಡಲು ಮಕ್ಕಾದಲ್ಲಿ ಧೀರರಿಗೇನೂ ಕೊರತೆಯಿರಲಿಲ್ಲ. ರಕ್ಷಣಾ ಕವಚವನ್ನು ಒದಗಿಸುವ ಅಬೂ ತ್ವಾಲಿಬರ ಮನೆಯೂ ದೂರವಿರಲಿಲ್ಲ. ಆ ನಾಡಿನಲ್ಲಿ ಪುರೋಹಿತರೂ ಪ್ರಮುಖರೂ ಅಸಂಖ್ಯಾತರಾಗಿದ್ದರು, ಆದರೆ ಅವರ ತಲ್ಲಣಕ್ಕೆ ಮದ್ದಿದ್ದದ್ದು ಪ್ರೀತಿಯ ಮಡಲಿನಲ್ಲಿ ಮಾತ್ರ. ಪ್ರಣಯವೇ, ಕಾಳಜಿಯೇ, ಸ್ನೇಹವೇ ಎಲ್ಲ ನೋವುಗಳಿಗೂ ಮದ್ದು ಎಂದು ಸಾರುವ, ದಾಂಪತ್ಯದ ಬಗೆಗಿನ ನಂಬಿಕೆಯು ಇಲ್ಲಿ ಎಷ್ಟು ಮನೋಹರವಾಗಿ ಮಾತನಾಡುತ್ತದೆ!
ಜೊತೆಯಾಗಿ ಬಂದವನು ಒಬ್ಬ ಮನುಷ್ಯನೆಂಬ ನೆನಪಿರಬೇಕೆಂದು, ಮನುಷ್ಯಸಹಜವಾದ ಎಲ್ಲಾ ನ್ಯೂನತೆಗಳೊಂದಿಗೂ ಅವಳನ್ನು ಸ್ವೀಕರಿಸಬೇಕೆಂದು, ಪ್ರೀತಿಯ ಮಳೆಯಾಗಬೇಕೆಂದು, ಪರಸ್ಪರ ಕರುಣೆಯ ಸೇತುವೆಯನ್ನು ನಿರ್ಮಿಸಬೇಕೆಂದು ಪವಿತ್ರ ಕುರಾನ್ ಬೋಧಿಸುತ್ತದೆ.
ಹೆಣ್ಣಿನ ಬೆಲೆ ಅರಿಯದವರು ಅವಳನ್ನು ಕೇವಲ ಮಾರಾಟದ ವಸ್ತುವಾಗಿಸಿದರು. ಪಾಶ್ಚಿಮಾತ್ಯ ಹಿನ್ನೆಲೆಯಲ್ಲಿ ಕುಟುಂಬ, ಬಾಂಧವ್ಯ, ಗೌರವ ಇವುಗಳೊಂದಿಗೆ ಎಂದಿಗೂ ಪ್ರಾಮಾಣಿಕತೆ ಇರಲಿಲ್ಲ.
Page 10
ಇಂದಿನ ಕಾಲದಲ್ಲಿ ಮರಣದವರೆಗೂ ಪ್ರೀತಿಸುವುದಕ್ಕಲ್ಲ, ಬದಲಿಗೆ ಸಾಕೆನಿಸುವವರೆಗೆ ಪ್ರೀತಿಸಲು ನಿರಂತರವಾಗಿ ಹೊಸ ಪದಗಳನ್ನು ನಿಘಂಟುವಿನಲ್ಲಿ ಹುಡುಕುವವರಿದ್ದಾರೆ.
ಇಂತಹ ಸನ್ನಿವೇಶದಲ್ಲಾಗಿದೆ ಮರಣದವರೆಗೂ ಹಾಗೂ ಆನಂತರದ ಪರಲೋಕದ ಬದುಕಿನಲ್ಲೂ ಪ್ರೀತಿಸಲು ಪ್ರೇರೇಪಿಸುವ ಅಲಿ ಮತ್ತು ಫಾತಿಮಾ (ರ) ಅವರ ಜೀವನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಕೇವಲ ಒಂಬತ್ತು ವರ್ಷಗಳ ಕಾಲ ಮಾತ್ರವೇ ಉಳಿದ ಒಂದು ದಾಂಪತ್ಯ ಪ್ರಣಯ. ಅದರಲ್ಲಿ ಅವರು ಮೂಡಿಸಿದ ಹೆಜ್ಜೆಗುರುತುಗಳು ಮಾತ್ರ ಅನೇಕ ತಲೆಮಾರುಗಳಿಗೆ ಮಾದರಿಯಾಗಿವೆ. ಆಧುನಿಕತೆಯ ಈ ವರ್ತಮಾನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಮುನಿಸಿಕೊಳ್ಳುವವರಿಗೆ ಅಲಿ, ಫಾತಿಮಾರಲ್ಲಿ ಮಾದರಿಯಿದೆ. ಅಲಿ ಹೇಗಿದ್ದರೋ ಹಾಗೆಯೇ, ಫಾತಿಮಾ ಹೇಗಿದ್ದರೋ ಹಾಗೆಯೇ ಇರಲು ಅವರು ಪರಸ್ಪರ ಇಷ್ಟಪಟ್ಟರು. ಆ ಇಷ್ಟವೇ ಯಾವುದೇ ಷರತ್ತುಗಳಿಲ್ಲದ ತ್ಯಾಗ ಮನೋಭಾವದಿಂದ ಅನೇಕ ರಾತ್ರಿಗಳನ್ನು ವರ್ಣರಂಜಿತವಾಗಿಸಿದ್ದು. ಪ್ರೀತಿಯ ಹೊಸ ವಿಳಾಸವನ್ನು ನೀಡಿದ್ದು. ಮದೀನಾದ ಸುಂದರ ಭೂಮಿಯಲ್ಲಿ ಒಂದೇ ದಿಕ್ಕಿನಲ್ಲಿ ಇಲಾಹನನ್ನು ಹುಡುಕಿದವರ, ಆತನ ಪ್ರವಾದಿಯ ಒಲವಿಗಾಗಿ ಸ್ಪರ್ಧಿಸಿದವರ ಅಪೂರ್ವ ಸಂಗಮವೇ ಅಲಿ ಮತ್ತು ಫಾತಿಮಾ (ರ). ಭಕ್ತಿಯನ್ನೇ ಮುಖಮುದ್ರೆಯಾಗಿಸಿಕೊಂಡ ಒಂದು ಪಯಣವಿದು...
ಆ ಹಾದಿಯಲ್ಲಿ ನಾವೂ ಒಮ್ಮೆ ನಡೆದು ಬರೋಣ...
ಅಲಿಯವರು ಫಾತಿಮಾರಿಗಾಗಿ ಹೂವುಗಳನ್ನು ಉಡುಗೊರೆಯಾಗಿ ನೀಡಲಿಲ್ಲ... ಆದರೆ ಹೃದಯದ ವಿಶಾಲತೆಯನ್ನೇ ಹೂದೋಟವನ್ನಾಗಿಸಿ ಅರ್ಪಿಸಿದರು...
ಲೋಕದ ದೃಷ್ಟಿಯಲ್ಲಿ ಕಷ್ಟಗಳು ಎನಿಸುವ ಹಲವು ಸಂಗತಿಗಳು ಅವರಿಗೆ ಅನಿರೀಕ್ಷಿತ ಆಶ್ಚರ್ಯಗಳಾಗಿದ್ದವು. ಫಾತಿಮಾರ ಆಸೆಯನ್ನು ತೀರಿಸಿಕೊಳ್ಳಲು ಸೊಂಟದ ಪಟ್ಟಿಯೊಂದನ್ನು ಮಾರಿ ತಂದಿದ್ದ ಸಿಹಿಯಾದ ಖರ್ಜೂರವನ್ನು, ಹಸಿದು ಬಂದವನಿಗೆ ಪೂರ್ತಿಯಾಗಿ ದಾನ ಮಾಡಿದ ಅಲಿ (ರ) ಅವರ ನಡೆ, ಈ ಆಧುನಿಕ ಕಾಲದ ಪತ್ನಿಯರ ಕಣ್ಣುಗಳಲ್ಲಿ ಏನಾಗಿ ಕಾಣಬಹುದು?
ಫಾತಿಮಾರಿಗೆ ಅದೊಂದು ಆಶ್ಚರ್ಯಕರ ಕೊಡುಗೆಯಾಗಿತ್ತು...
ಹಾಗಾದರೆ ಬನ್ನಿ, ಆ ಸುಂದರ ಮಧುಚಂದ್ರದ ರಾತ್ರಿ-ಹಗಲುಗಳ ಕಥೆಯನ್ನು ಓದೋಣ...
ಮುಂದುವರೆಯುವುದು.....