"ಅಲಿ ಫಾತಿಮಾ" ಬಾಗ-4
ಫಾತಿಮಾಗೆ ಈಗ ನಾಲ್ಕು ವರ್ಷ ವಯಸ್ಸು
ಅಲಿ ಫಾತಿಮಾ
Haneef Baqavi
6/28/20261 min read


ಪುಟ 16
ಅಲ್ ಅಮೀನ್ ಮತ್ತು ಖದೀಜಾ ಬೀವಿಯವರ ಸಂರಕ್ಷಣೆಯಲ್ಲಿ ಸ್ನೇಹಪೂರ್ಣವಾದ ರಾತ್ರಿ-ಹಗಲುಗಳು ಆ ದಿನಗಳನ್ನು ವರ್ಣರಂಜಿತವಾಗಿಸಿದವು. ಅಲಿಯವರೂ ಸಹ ಆ ಮನೆಯಲ್ಲಿ ಅವರದೇ ಸಂರಕ್ಷಣೆ ಮತ್ತು ಲಾಲನೆ-ಪಾಲನೆಯಲ್ಲಿ ಬೆಳೆದರು.
ಫಾತಿಮಾಗೆ ಈಗ ನಾಲ್ಕು ವರ್ಷ ವಯಸ್ಸು. ವಯಸ್ಸಿಗಿಂತ ಮಿಗಿಲಾದ ಪ್ರಬುದ್ಧತೆಯನ್ನು ತೋರಿಸಿದ ಆಕೆ ರಸೂಲರ ಅತ್ಯಂತ ಪ್ರೀತಿಯ ಮಗಳಾಗಿದ್ದಳು. ದಿನವಿಡೀ ತನ್ನೊಂದಿಗೆ ಆಟವಾಡುತ್ತಾ, ನಗುತ್ತಾ ಕಾಲ ಕಳೆಯುತ್ತಿದ್ದ ತಂದೆಯನ್ನು ಬಾಲಕಿ ಫಾತಿಮಾಗೆ ನಿಧಾನವಾಗಿ ದೂರವಾಗತೊಡಗಿದರು.
ಆಧ್ಯಾತ್ಮಿಕ ಹಸಿವನ್ನು ತಣಿಸಲು ಪ್ರಕಾಶ ಪರ್ವತದ ಮೇಲೆ ತಪಸ್ಸು ಮಾಡಲು ಪ್ರಾರಂಭಿಸಿದ ತಂದೆಯಲ್ಲಿ ಅಸ್ವಾಭಾವಿಕವಾದ ಹಲವು ಬದಲಾವಣೆಗಳು ನಡೆಯುತ್ತಿರುವುದನ್ನು ನಾಲ್ಕು ವರ್ಷದ ಕೌತುಕದ ಕಣ್ಣುಗಳಿಂದ ಫಾತಿಮಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು.
ಕಾಬಾದಲ್ಲಿ ನಡೆಯುತ್ತಿದ್ದ ವಿಗ್ರಹಾರಾಧನೆ, ಅರಾಜಕತೆ ಹಾಗೂ ಅಬಲರ ಮೇಲಿನ ದೌರ್ಜನ್ಯಗಳು ಸಮಾಜದ ಕಷ್ಟಗಳು ರಸೂಲರ (ಸ) ಆತ್ಮವನ್ನು ತೀವ್ರವಾಗಿ ಕಾಡುತ್ತಿದ್ದವು. ಆ ಕೆಡುಕಿನಿಂದ ಮುಕ್ತಿ ಮತ್ತು ಬೆಳಕನ್ನು ಹುಡುಕುತ್ತಾ ರಸೂಲರು (ಸ) ಅನ್ವೇಷಣೆಯಲ್ಲಿ ಮುಳುಗಿದರು. ಆ ಅನ್ವೇಷಣೆಯ ನೋವಿಗಿಂತ ದೊಡ್ಡದಾದ ನೋವು ಬೇರೇನೂ ಇರಲಿಲ್ಲ. ಅಸ್ವಾಭಾವಿಕತೆಯಿಂದ ತುಂಬಿದ ರಾತ್ರಿ-ಹಗಲುಗಳು, ಆಧ್ಯಾತ್ಮಿಕ ಅನ್ವೇಷಣೆಯ ಉತ್ತುಂಗದಲ್ಲಿ ಸಿಲುಕಿದ್ದ ತಂದೆಯ ಬದಲಾವಣೆಗಳು ಫಾತಿಮಾಗೆ ತೀವ್ರ ವಿಷಾದವನ್ನುಂಟು ಮಾಡಿದವು.
ಕೆಲವು ದಿನಗಳಲ್ಲಿ ಆಹಾರದ ಪಾತ್ರೆಗಳೊಂದಿಗೆ ತಂದೆ ಬೆಟ್ಟದ ಕಡೆಗೆ ನಡೆದು ಹೋಗುತ್ತಿದ್ದರು. ಮರಳಿ ಬರುವ ಪ್ರೀತಿಯ ತಂದೆಯನ್ನು ಫಾತಿಮಾ ಕಣ್ಣಿಟ್ಟು ಕಾಯುತ್ತಿದ್ದಳು. ತಂದೆ ಮರಳಿ ಬಾರದ ರಾತ್ರಿಗಳು ಆಕೆಯ ಮನಸ್ಸಿನಲ್ಲಿ ನೋವನ್ನು ಹರಡುತ್ತಿದ್ದವು. ಸ್ನೇಹನಿಧಿಯಾದ ಆ ತಂದೆಯ ಆ ಸಾಮೀಪ್ಯವನ್ನು ಆಕೆ ಪ್ರತೀದಿನ ಬಯಸುತ್ತಿದ್ದಳು. ಮರಳಿ ಬರದ ತಂದೆಗೆ ಆಹಾರದ ಪಾತ್ರೆಗಳೊಂದಿಗೆ ಬೆಟ್ಟ ಹತ್ತುವ ತಾಯಿಯನ್ನು ಫಾತಿಮಾ ಶ್ರದ್ಧೆಯಿಂದ ನೋಡುತ್ತಾ ನಿಲ್ಲುತ್ತಿದ್ದಳು.
ಕೆಲವು ದಿನಗಳಲ್ಲಿ ಆತಂಕ ತುಂಬಿದ ಮುಖದೊಂದಿಗೆ ಬಂದ ತಂದೆ, ತಾಯಿಯ ಬಳಿ ತಮ್ಮ ಆತಂಕಗಳನ್ನು ಹಂಚಿಕೊಳ್ಳುತ್ತಿದ್ದರು. ಕನಸಿನಲ್ಲಿ ಕಂಡ ಕಥೆಗಳು ಹಾಗೂ ತಪಸ್ಸು ಮಾಡುತ್ತಿದ್ದ ಗುಹೆಯಲ್ಲಿ ಕೇಳಿಬಂದ ಧ್ವನಿಗಳನ್ನೆಲ್ಲಾ ರಸೂಲರು...
ಪುಟ 17
ಖದೀಜಾ ಬೀವಿಯವರೊಂದಿಗೆ ಹೇಳುವುದನ್ನು ಬಾಲಕಿ ಫಾತಿಮಾ ಕೇಳಿಸಿಕೊಳ್ಳುತ್ತಿದ್ದಳು. ತನ್ನ ತಾಯಿ ಹೇಳಿಕೊಡುವ ಸಮಾಧಾನದ ಮಾತುಗಳಲ್ಲಿ ತಂದೆ ನೆಮ್ಮದಿಯ ತೀರವನ್ನು ಕಂಡುಕೊಳ್ಳುವುದನ್ನು ಮತ್ತು ಆತಂಕ ದೂರವಾಗಿ ಶಾಂತರಾಗುವುದನ್ನು ಐದನೇ ವರ್ಷದ ಮುಗ್ಧತೆಯಲ್ಲಿ ಬಾಲಕಿ ಫಾತಿಮಾ ಗಮನಿಸುತ್ತಿದ್ದಳು.
ಆ ಮನೆ ಅಸ್ವಾಭಾವಿಕತೆಗಳಿಂದ ಮತ್ತು ಆಕಾಂಕ್ಷೆಗಳ ತಲ್ಲಣದಿಂದ ಕೂಡಿತ್ತು. ಆಧ್ಯಾತ್ಮಿಕ ಅನ್ವೇಷಣೆಯ ಉತ್ತುಂಗದಲ್ಲಿ ತ್ಯಾಗಪೂರ್ಣವಾದ ರಾತ್ರಿ-ಹಗಲುಗಳನ್ನು ಕಳೆಯುತ್ತಿದ್ದ ತಂದೆಯನ್ನು ತಾಯಿ ಜೊತೆಯಾಗಿ ನಿಲ್ಲಿಸಿ ಧೈರ್ಯ ತುಂಬುವ ದೃಶ್ಯವನ್ನು ಕಂಡು ಫಾತಿಮಾ ಹಾಗೂ ಆ ಮನೆಯಲ್ಲಿದ್ದ ಅಲಿಯವರೂ ಬೆಳೆದರು.
ಪವಿತ್ರ ಕುರಾನ್‌ನ ಸಂದೇಶ ತಲುಪಿದ ದಿನದಂದು ಭಯದಿಂದ ನಡುಗುತ್ತಾ ಬಂದ ತಂದೆಯನ್ನು ಕಂಬಳಿಯೊಳಗೆ ಸೇರಿಸಿ ಸಾಂತ್ವನ ಹೇಳಿದ ತಾಯಿಯನ್ನು ಫಾತಿಮಾ ಹತ್ತಿರದಿಂದ ನೋಡಿದ್ದಳು. ಆ ರಾತ್ರಿ ಬೆಳಗಾಗುವವರೆಗೆ ಖದೀಜಾ ಬೀವಿಯವರೊಂದಿಗೆ ಬಾಲಕಿ ಫಾತಿಮಾ ಕೂಡ ಜಾಗರಣೆ ಮಾಡಿದ್ದಳು.
ಆಧ್ಯಾತ್ಮಿಕ ಅನ್ವೇಷಕಯನಾದ ಪ್ರಿಯತಮೆಗೆ ತಾಯಿ ನೀಡಿದ ಪ್ರೀತಿಯ ಬೆಂಬಲದಲ್ಲಿ, ಬಾಲ್ಯದಿಂದಲೆ ಕಂದು ಬೆಳೆದ ಫಾತಿಮಾ (ರ) ಗೆ ದಾಂಪತ್ಯದ ಸ್ನೇಹದ ಮೌಲ್ಯಗಳನ್ನು ಯಾರೂ ಹೇಳಿಕೊಡಬೇಕಾಗಿರಲಿಲ್ಲ.
ರಸೂಲ್-ಖದೀಜಾ ಪ್ರೇಮದ ಆಕಾಶದಲ್ಲಿನ ತ್ಯಾಗಮಯ ರಾತ್ರಿ-ಹಗಲುಗಳಿಗೆ ನಿಷ್ಕಳಂಕ ಮನಸ್ಸಿನಿಂದ ಸಾಕ್ಷಿಯಾದ, ಕಡಲಿನಿಂದ ಆರಿಸಿದ ಮುತ್ತಿನಂತಹ ಶ್ರೇಷ್ಠ ಹೆಣ್ಣಾಗಿ ಫಾತಿಮಾ ಬೆಳೆದಳು.
ಬಾಲ್ಯದಿಂದಲೇ ಜ್ಞಾನದ ಅನ್ವೇಷಕರಾಗಿದ್ದ ಅಲಿ (ರ) ಆ ಮನೆಯಲ್ಲಿ ಬೆಳೆದರು. ಒಳಿತಿನ ಹಾದಿಯಲ್ಲಿ ರಸೂಲರ (ಸ) ತ್ಯಾಗ ಮತ್ತು ಕಠಿಣ ಪರಿಶ್ರಮಗಳೆಲ್ಲವೂ ಅಲಿಯವರಲ್ಲಿ ಆಳವಾದ ಚಿಂತನೆಗಳನ್ನು ಮೂಡಿಸಿದವು.
ಬಾಲ್ಯದಲ್ಲಿ ರಸೂಲರನ್ನು ಕಂಡು ಬೆಳೆಯುವ ಅಪೂರ್ವ ಭಾಗ್ಯ ಪಡೆದ ಅಲಿಯವರ ಮನಸ್ಸು ಅದಕ್ಕೆ ತಕ್ಕಂತೆ ಪಕ್ವವಾಯಿತು. ಆ ಮನೆಯಲ್ಲಿ ನಡೆಯುತ್ತಿದ್ದ ಅಸ್ವಾಭಾವಿಕ ಘಟನೆಗಳಿಗೆ ಫಾತಿಮಾ ಮತ್ತು ಅಲಿ ಸಾಕ್ಷಿಯಾಗಿದ್ದರು.
ತಂದೆಗೆ ಪ್ರವಾದಿತ್ವ ಲಭಿಸುವುದೆಂದೂ, ಅದನ್ನು ಮಕ್ಕಾದವರು ಒಪ್ಪಿಕೊಳ್ಳುವುದಿಲ್ಲವೆಂದೂ, ಮಕ್ಕಾದವರು ತನ್ನ ತಂದೆಯನ್ನು ಹಿಂಸಿಸಿ ಓಡಿಸುತ್ತಾರೆಂಬ...
ಪುಟ 18
ಸುದ್ದಿಯು ಫಾತಿಮಾಗೆ ತೀವ್ರ ವೇದನೆಯನ್ನು ನೀಡಿತು. ಮುಂಬರುವ ದಿನಗಳ ಕಷ್ಟಗಳನ್ನು ನೆನೆದು ತಂದೆಯ ಮೇಲಿನ ಪ್ರೀತಿಯಿಂದ ಫಾತಿಮಾ ಆತಂಕಕ್ಕೊಳಗಾದಳು.
ಸತ್ಯವನ್ನು ಹಿಂಬಾಲಿದ ತಾಯಿಯ ಜೊತೆಗೂಡಿ ಬಾಲಕಿ ಫಾತಿಮಾ ಕೂಡ ಇಸ್ಲಾಂ ಧರ್ಮವನ್ನು ಸ್ವೀಕರಿಸಿದಳು. ಆನಂತರ ಅಲಿಯವರ ಸರದಿಯಾಗಿತ್ತು.ತಾನು ಕಂಡು ಬೆಳೆದ ಅತ್ಯಂತ ಶ್ರೇಷ್ಠ ಮನುಷ್ಯನ ಮಾತುಗಳ ಸತ್ಯವನ್ನು ಒಪ್ಪಿಕೊಳ್ಳುವುದು ಅಲಿಯವರಿಗೂ ಪ್ರಿಯವಾಗಿತ್ತು. ಹತ್ತನೇ ವಯಸ್ಸಿನ ಬಾಲ್ಯದಲ್ಲೇ ಇಸ್ಲಾಂ ಸ್ವೀಕರಿಸಿದ ಮೊದಲ ಬಾಲಕನಾಗಿ ಅಲಿ (ರ) ಮೂಡಿಬಂದರು.
ಧೀರನಾಗಿ ಬೆಳೆಯಬೇಕೆಂದು ತಾಯಿ ಹೆಸರಿಟ್ಟು ಬೆಳೆಸಿದ ಅಲಿ (ರ) ಶೂರನಾಗಿ ಬೆಳೆದರು. ಕೇವಲ ಬಲಶಾಲಿ ಹೋರಾಟಗಾರನಷ್ಟೇ ಅಲ್ಲದೆ, ಸುಂದರವಾದ ಕವಿತೆಗಳನ್ನು ವಾಚಿಸುವ ಪ್ರತಿಭೆಯೂ ಅವರಲ್ಲಿತ್ತು.
ರಸೂಲರು (ಸ) ಪ್ರವಾದಿತ್ವವನ್ನು ಘೋಷಿಸಿ ಧರ್ಮಪ್ರಚಾರವನ್ನು ಪ್ರಾರಂಭಿಸುತ್ತಿದ್ದಂತೆ, ಅಲ್ಲಿಯವರೆಗೆ ಅವರನ್ನು 'ಅಲ್ ಅಮೀನ್' (ನಂಬಿಕಸ್ಥ) ಎಂದು ಕರೆಯುತ್ತಿದ್ದವರು ಸತ್ಯದ ವಿರುದ್ಧ ಕಲ್ಲು ತೂರತೊಡಗಿದರು. ರಸೂಲರು ಎದುರಿಸಿದ ಕಠಿಣ ಹಿಂಸೆಗಳನ್ನೆಲ್ಲಾ ವೇದನೆಯಿಂದ ನೋಡುತ್ತಾ, ತನ್ನ ತಾಯಿಯ ಹಾದಿಯಲ್ಲೇ ತಂದೆಗೆ ಧೈರ್ಯ ತುಂಬಲು ಮನಸ್ಸನ್ನು ಸಿದ್ಧಗೊಳಿಸಿ, ಫಾತಿಮಾ ಬೀವಿ ಬೆಳೆಯುತ್ತಿದ್ದಾಗ, ಪ್ರತಿಕೂಲ ಪರಿಸ್ಥಿತಿಗಳಲ್ಲಿ ದೃಢಮನಸ್ಸಿನ ಮತ್ತು ಧೈರ್ಯಶಾಲಿಯಾದ ಹೋರಾಟಗಾರನಾಗಿ ಅಲಿ (ರ) ಬದಲಾಗುತ್ತಿದ್ದರು.
ಮಕ್ಕಾದ ಅರಾಜಕತಾವಾದಿಗಳು ತನ್ನ ತಂದೆಯನ್ನು ಕ್ರೂರವಾಗಿ ಮರ್ದಿಸುವುದನ್ನು ಫಾತಿಮಾ ವೇದನೆಯಿಂದ ನೋಡುತ್ತಿದ್ದಳು. ಕಾಬಾದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ರಸೂಲರ (ಸ) ಕುತ್ತಿಗೆಗೆ ಮುಷ್ರಿಕರು ಒಂಟೆಯ ಕರುಳಿನ ಮಾಲೆಯನ್ನು ಹಾಕಿದಾಗ ವೇದನೆಯಿಂದ ಓಡಿಬಂದ ಆ ಮಗಳು, ನೊಂದ ತಂದೆಗೆ ಸಾಂತ್ವನದ ಮಾತುಗಳನ್ನು ಹೇಳುವುದನ್ನು ಬಾಲ್ಯದಲ್ಲೇ ತನ್ನ ತಾಯಿಯಿದ ಕಲಿತಿದ್ದಳು. ದೌರ್ಜನ್ಯಗಳು ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದ ರಸೂಲರಿಗೆ ಪ್ರೀತಿಯ ಕವಚವಾಗಲು ಬಾಲಕಿ ಫಾತಿಮಾ ಸದಾ ಜಾಗರೂಕಳಾಗಿ ನಿಂತಿದ್ದಳು.
ರಸೂಲರ ಕುಟುಂಬವನ್ನು ಬಹಿಷ್ಕರಿಸಿದಾಗ, ಹಸಿವಿನಿಂದ ಕಳೆಯುತ್ತಿದ್ದ ದಿನಗಳಲ್ಲೂ ತಾಯಿ ಮತ್ತು ತಂದೆಯ ಸಹನೆ ಹಾಗೂ ತಾಳ್ಮೆಯ ಪಾಠಗಳನ್ನು ಫಾತಿಮಾ ಕಲಿತಳು. ಕಠಿಣವಾದ ರಾತ್ರಿ-ಹಗಲುಗಳಲ್ಲಿ ರಸೂಲರಿಗೆ ಮತ್ತು ಅವರ ಕುಟುಂಬಕ್ಕೆ ಸ್ನೇಹನಿಧಿಯಾಗಿದ್ದ ತಾಯಿ ಇಹಲೋಕ ತ್ಯಜಿಸಿದಾಗ...
ಮುಂದುವರಿಯುವುದು......