ಇವಳೇನು ಆರನೇ ಶತಮಾನದಲ್ಲಿ ಬದುಕುತ್ತಿದ್ದಾಳೆಯೇ?, ಭಾಗ-08
ಹಬೀಬರ ಅನುರಾಗಿಣಿ
5/25/20261 min read


Page 25
ನೂರಾ ತನ್ನ ಮುಖವನ್ನು ನೋಡಿ ನಗುತ್ತಿರುವುದನ್ನು ಕಂಡು ಫರ್ಸಾನ ಕೇಳಿದಳು:
"ಏಯ್... ಅಲ್ಲ... ನಾನು ಆಲೋಚಿಸುತ್ತಿದ್ದೆ... ನಾವೆಲ್ಲರೂ ಮುಸ್ಲಿಮರಲ್ಲವೇ...?"
"ಹೌದು..." ಫರ್ಸಾನ ತಲೆಯಾಡಿಸಿದಳು.
"ನಾವು ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎಂದು ಇಸ್ಲಾಂ ಹೇಳಿಲ್ಲವೇ? ಹಾಗಿದ್ದ ಮೇಲೆ ನಮಗೆ ಯಾಕೆ ಸಂಕೋಚ ಇರಬೇಕು?" ನೂರಾ ಸಹಜವಾಗಿ ಕೇಳಿದಳು.
"ಅದೆಲ್ಲಾ ಸರಿ... ಆದರೆ, ನಾವು ಕಾಲಕ್ಕೆ ತಕ್ಕಂತೆ ಬದಲಾಗಬೇಕಲ್ಲವೇ..." ಫರ್ಸಾನ ನೂರಾ ಮಾತು ಮುಗಿಸುವ ಮೊದಲೇ ಮಧ್ಯ ಪ್ರವೇಶಿಸಿ ಕೇಳಿದಳು.
"ಓಕೆ... ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬುವುದು ನಿನ್ನ ವಾದವಾದರೆ ನಾನೊಂದು ಉದಾಹರಣೆ ಹೇಳುತ್ತೇನೆ... ನೀನು ಗಮನವಿಟ್ಟು ಕೇಳು..." ಫರ್ಸಾನಳ ಸಂಭಾಷಣೆಯ ಗತಿ ಎತ್ತ ಸಾಗುತ್ತಿದೆ ಎಂದು ಅರ್ಥ ಮಾಡಿಕೊಂಡ ನೂರಾ ಹೇಳಿದಳು.
"ಆ ಹೇಳು..." ಫರ್ಸಾನ ಕುತೂಹಲದಿಂದ ಕಿವಿಗೊಟ್ಟಳು.
"ನಾವೆಲ್ಲರೂ ಈ ಕಾಲೇಜಿನ ವಿದ್ಯಾರ್ಥಿಗಳಲ್ಲವೇ...?"
"ಹೌದು..."
"ಈ ಕಾಲೇಜಿಗೆ ಅಡ್ಮಿಷನ್ ಪಡೆಯುವ ಸಮಯದಲ್ಲಿ ಕಾಲೇಜು ಹಲವಾರು ನಿಯಮಗಳನ್ನು ವಿಧಿಸಿತ್ತು. ಅಂದರೆ... ದ್ವಿತೀಯ ಪಿಯುಸಿ ಇಷ್ಟು ಶೇಕಡಾ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು. ಗಂಡುಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಎರಡು ಪ್ರತ್ಯೇಕ ಹಾಸ್ಟೆಲ್‌ಗಳಿರುತ್ತವೆ. ಸರಿಯಾಗಿ ರಾತ್ರಿ ಒಂಬತ್ತು ಗಂಟೆಗೆ ಹಾಸ್ಟೆಲ್ ಗೇಟ್ ಹಾಕಲಾಗುತ್ತದೆ. ಹೀಗೆ ಈ ಕ್ಯಾಂಪಸ್ ಒಳಗೆ ನಾವು ವಿದ್ಯಾರ್ಥಿಗಳು ಪಾಲಿಸಬೇಕಾದ ಹಲವಾರು ನಿಯಮಾವಳಿಗಳಿವೆ..."
ನೂರಾ ಒಂದು ಕ್ಷಣ ನಿಲ್ಲಿಸಿದ ನಂತರ ಗಂಟಲು ಸರಿಪಡಿಸಿಕೊಂಡಳು.
"ಹೌದು... ಅದೆಲ್ಲವೂ ಕಾಲೇಜಿನ ಸುಗಮ ನಿರ್ವಹಣೆಗಾಗಿ ಮಾಡಿದ್ದಲ್ಲವೇ..." ನೂರಾಳ ಪ್ರಶ್ನೆಯಲ್ಲಿ ಯಾವುದೇ ಅಸ್ವಾಭಾವಿಕತೆ ಕಾಣದ ಫರ್ಸಾನ ಕೇಳಿದಳು.
"ಓಕೆ... ಸರಿ, ಈಗ ಹೇಳುವ ವಿಷಯವನ್ನು ನೀನು ವಿಶೇಷವಾಗಿ ಗಮನಿಸಬೇಕು. ಒಂದು ವೇಳೆ ನಮ್ಮ ಕಾಲೇಜಿನ ಹೊರಗಡೆ ಹೋಗುವ ಕೆಲವರು ಹೀಗೆ ಹೇಳುತ್ತಿದ್ದಾರೆಂದು ಭಾವಿಸೋಣ; 'ಇದೆಂಥಾ ಅಸಮಾನತೆ, ಸ್ತ್ರೀಯರಿಗೆ ಮತ್ತು ಪುರುಷರಿಗೆ ಎರಡು ಬೇರೆ ಬೇರೆ ಹಾಸ್ಟೆಲ್‌ಗಳೇ... ಒಂದು ಸಾಲದೇ... ಅದೆಲ್ಲ ಸಮಾನತೆ'. ಇನ್ನೊಂದು ಕಡೆಯವರು ಕೇಳುತ್ತಾರೆ, 'ಎಲ್ಲರಿಗೂ ಓದಲು ಸಮಾನ ಹಕ್ಕಿಲ್ಲವೇ... ದ್ವಿತೀಯ ಪಿಯುಸಿ ಪಾಸಾಗಬೇಕು ಎಂದೆಲ್ಲಾ ನಿಯಮ ಏಕಿರಬೇಕು?' ಇಂತದ್ದನ್ನೆಲ್ಲಾ ಕೇಳಿದರೆ... ನಾವು ಅದನ್ನು ಪರಿಗಣಿಸುತ್ತೇವೆಯೇ?" ನೂರಾ ಫರ್ಸಾನಳ ಉತ್ತರಕ್ಕಾಗಿ ಕಾಯುತ್ತಿದ್ದಳು.
"ಅದೇನು ಪ್ರಶ್ನೆ ಮಾರಾಯ್ತಿ... ಎಲ್ಲದಕ್ಕೂ ಒಂದು ಅಡಿಪಾಯ ಮತ್ತು ಮಾರ್ಗಸೂಚಿ ಬೇಕಲ್ಲವೇ..." ಫರ್ಸಾನ ಕುತೂಹಲದಿಂದ ಕೇಳಿದಳು.
"ಹೌದು.. ಅದು ಬೇಕು. ಅದನ್ನೇ ನಾನೂ ಹೇಳುತ್ತಿರುವುದು. ಈ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಇವೆಲ್ಲವನ್ನೂ ಪಾಲಿಸಬೇಕೆಂದು ಕಾಲೇಜು ಹೊರಡಿಸಿದ ನಿಯಮವಿದು.
Page 26
ಆ ನಿಯಮವನ್ನು ಕಾಲೇಜಿನ ಹೊರಗಿರುವವರು ಏನು ಟೀಕಿಸಿದರೂ ಇಲ್ಲಿನ ವಿದ್ಯಾರ್ಥಿಗಳಾದ ನಾವು ನಿಯಮಗಳನ್ನು ಪಾಲಿಸಲು ಮತ್ತು ಅನುಸರಿಸಲು ಬದ್ಧರಾಗಿದ್ದೇವೆ. ಅದನ್ನು ಅರಿತುಕೊಂಡೇ ನಾವೆಲ್ಲರೂ ಈ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದೇವೆ ಅಲ್ವಾ...?" ಫರ್ಸಾನಾ ನಗುನಗುತ್ತಲೇ ತಲೆ ಅಲ್ಲಾಡಿಸಿದಳು. ನೂರಾ ಅವಳ ಮಾತಿನ ಶೈಲಿಯನ್ನು ನೋಡಿ ಅವಳು ವಿಷಯವನ್ನು ಅರ್ಥಮಾಡಿಕೊಳ್ಳುತ್ತಿದ್ದಾಳೆ ಎಂದು ಭಾವಿಸಿದಳು.
"ಆಗ ನಾನು ಒಬ್ಬ ಮುಸ್ಲಿಂ ಎಂದು ಒಪ್ಪಿಕೊಳ್ಳುವಾಗ ನನ್ನ ಧರ್ಮ ಹೇಳುವಂತೆ ಬದುಕಲು ನನಗೆ ಅಪಕರ್ಷಣೆ ಯಾಕೆ? ಬೇರೆಯವರು ಏನು ಹೇಳುತ್ತಾರೆ ಎಂದು ನೋಡಬೇಕೇ? ಬೇಡ... ಕಾರಣ, ನನಗೆ ಇಷ್ಟವಾದ ಕಾರಣದಿಂದಲೇ ನಾನು ಮನಸ್ಸಾರೆ ಮತ್ತು ದೈಹಿಕವಾಗಿ ಈ ಧರ್ಮವನ್ನು ಸ್ವೀಕರಿಸಿದ್ದು. ಹಾಗಾಗಿ ಇತರರಿಗಾಗಿ ಬದುಕುವ ಬದಲು ನಮಗಾಗಿ ಬದುಕುವುದೇ ಒಳ್ಳೆಯದಲ್ಲವೇ...?" ಅವಳ ಪ್ರಶ್ನೆಯಿಂದ ಫರ್ಸಾನಾ ಒಂದು ಕ್ಷಣ ಆಲೋಚನೆಯಲ್ಲಿ ಮುಳುಗಿದಳು. "ಕ್ಲಾಸ್ ಶುರುವಾಗುವ ಸಮಯವಾಯಿತು... ಪರ್ದಾ ಹಾಕಿಕೋ... ನಾವು ಹೋಗೋಣ..." ಎಂದು ನೂರಾ ಹೇಳಿದಾಗ ಫರ್ಸಾನಾ ಬೆಚ್ಚಿಬಿದ್ದು ಎದ್ದಳು.
ಮಧ್ಯಾಹ್ನದ ನಂತರದ ತರಗತಿಯಲ್ಲಿ ಫರ್ಸಾನಾ ತೀವ್ರ ಆಲೋಚನೆಯಲ್ಲಿದ್ದಳು. ಲುಹರ್ ನಮಾಜಿನ ನಂತರ ನೂರಾ ಜೊತೆ ನಡೆದ ಸಂಭಾಷಣೆಯೇ ಅವಳ ಆಲೋಚನೆಗೆ ನಾಂದಿ ಹಾಡಿತ್ತು. "ನೂರಾ... ಆ ಹೆಸರನ್ನು ಮೊದಲು ಕೇಳಿದಾಗಲೇ ಏನೋ ಒಂದು ಆಕರ್ಷಣೆ ಇದೆ ಎಂದು ಅನಿಸಿತ್ತು. ಆದರೆ ಮೊದಲ ದಿನ ನೂರಾ ತರಗತಿಗೆ ಬಂದಾಗ ಅವಳ ಪರ್ದಾವನ್ನು ನೋಡಿ ನನಗೆ ಏನೋ ಒಂದು ರೀತಿಯ ಕೀಳರಿಮೆ ಉಂಟಾಗಿತ್ತು. ಅಂದು ಎಲ್ಲರೂ ಅವಳನ್ನು ನೋಡಿ ಗೇಲಿ ಮಾಡಿ ನಗುವಾಗ ನಾನು ಕೂಡ ನಕ್ಕಿದ್ದೆ. 'ಇವಳೇನು ಆರನೇ ಶತಮಾನದಲ್ಲಿ ಬದುಕುತ್ತಿದ್ದಾಳೆಯೇ? ಇಂತಹ ವ್ಯಕ್ತಿಗೆ ಈ ಕಾಲದಲ್ಲಿ ಕಾಲೇಜಿಗೆ ಬರಲು ಸಾಧ್ಯವೇ...?' ಹೀಗೆ ಹಲವಾರು ಪ್ರಶ್ನೆಗಳು ಅಂದು ನನ್ನ ಮನಸ್ಸಿನಲ್ಲಿ ಓಡಿದ್ದವು. ಆದರೆ ಇಂದು ಅವಳ ಜೊತೆಗಿನ ಸಂಭಾಷಣೆಯು ವಿಷಯಗಳ ದಿಕ್ಕನ್ನೇ ಬದಲಿಸಿದೆ. ತಾನು ತನಗಾಗಿ ಬದುಕಬೇಕೇ ಹೊರತು ಇತರರಿಗಲ್ಲ ಎನ್ನುವುದೇ ಅವಳು ಹೇಳಿದ್ದರ ಸಾರಾಂಶ. ಅದು ಸರಿಯೇ ಅಲ್ವಾ? ಎಷ್ಟೋ ಬಾರಿ ನನ್ನ ಗುರುತನ್ನು ಬಹಿರಂಗಪಡಿಸಲು, ಯಾಕೆ ತಲೆಗೆ ಸ್ಕಾರ್ಫ್ ಹಾಕಿಕೊಳ್ಳಲೂ ನನಗೆ ಸಂಕೋಚ ಅನಿಸಿದೆ. ಇತರರು ಏನು ಅಂದುಕೊಳ್ಳಬಹುದು ಎಂಬ ಭಯದಲ್ಲಿ ನಾನು ಬದುಕುತ್ತಿದ್ದೇನಲ್ಲವೇ...!?"
ಅವಳ ಆಲೋಚನೆಗಳು ಕಾಡಿನಂತೆ ಹಬ್ಬಿದವು. ಮನಸ್ಸಿನಲ್ಲಿ ಅಪರಾಧ ಪ್ರಜ್ಞೆ ಮೂಡತೊಡಗಿತು. ಎದೆಯಲ್ಲಿ ಏನೋ ಒಂದು ಭಾರವಾದ ಅನುಭವ. ತರಗತಿಯಲ್ಲಿ ಗಮನ ಹರಿಸಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಆ ಒಂದು ಗಂಟೆ ತರಗತಿಯಲ್ಲಿ ಅವಳು ಹೇಗೆ ಕಳೆದಳು ಎಂಬುವುದು ಅವಳಿಗೇ ತಿಳಿಯಲಿಲ್ಲ. ಇನ್ನುಳಿದ ಎರಡು ತರಗತಿಗಳು ಲೈಬ್ರರಿ ಸಮಯವಾಗಿತ್ತು. ಅವಳು ಅತುಲ್ಯ ಮತ್ತು ನೂರಾಳೊಂದಿಗೆ ಲೈಬ್ರರಿಗೆ ಹೋದಳು.
ಅದು ವಿಶಾಲವಾದ ಲೈಬ್ರರಿಯಾಗಿತ್ತು. ವಿವಿಧ ಕ್ಷೇತ್ರಗಳ ಪುಸ್ತಕಗಳನ್ನು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ಇರಿಸಲಾಗಿತ್ತು. ಅವರೊಂದಿಗೆ ಲೈಬ್ರರಿಯಲ್ಲಿ ಜೀವ ವಿಜ್ಞಾನ ಸಂಬಂಧಿಸಿದ ಪುಸ್ತಕಗಳನ್ನು ರೆಫರ್ ಮಾಡಲೆಂದು ಸುನಿತ ಮಿಸ್ ಹೇಳಿದ್ದರು
page 27
ಆದರೆ, ಹೆಚ್ಚಿನವರು ಮಲಯಾಳಂ ಲಿಟರೇಚರ್ ವಿಭಾಗದಲ್ಲಿದ್ದರು. ಅಷ್ಟಕ್ಕೂ ವಿಜ್ಞಾನದ ತಾಂತ್ರಿಕತೆಗಳನ್ನು ಅರ್ಥಮಾಡಿಕೊಳ್ಳದೆ ಈ ಪುಸ್ತಕಗಳನ್ನೆಲ್ಲಾ ಓದುವುದು ಹೇಗೆ? ಮಲಯಾಳಂಗೆ ಅನುವಾದಗೊಂಡ ಯಾವುದಾದರೂ ಸೈನ್ಸ್ ಫಿಕ್ಷನ್ ಕಾದಂಬರಿಗಳು ಇವೆಯೇ ಎಂದು ನೋಡೋಣ... ಅವಳು ಮಲಯಾಳಂ ಲಿಟರೇಚರ್ ಪುಸ್ತಕಗಳಿರುವ ವಿಭಾಗದ ಕಡೆಗೆ ನಡೆದಳು. 'ದಿ ಆಲ್ಕೆಮಿಸ್ಟ್' ಎಂಬ ಪುಸ್ತಕವನ್ನು ಕೈಗೆತ್ತಿಕೊಂಡಳು. ಬ್ರೆಝಿಲಿಯನ್ ಲೇಖಕ ಪಾಲೋ ಕೊಯೆಲೋ ಅವರ ವಿಶ್ವಪ್ರಸಿದ್ಧ ಕಾದಂಬರಿ ಇದಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಕೃತಿ ಎಂಬ ಗಿನ್ನೆಸ್ ದಾಖಲೆ ಪಡೆದ ಪುಸ್ತಕವಿದು.
ಇದನ್ನು ಅವಳು ಈ ಹಿಂದೆ ಒಮ್ಮೆ ಓದಿದ್ದಳು. ಸಾಕಷ್ಟು ಚೈತನ್ಯ ನೀಡಿದ ಪುಸ್ತಕ. ತನ್ನ ಆಸೆಗಳನ್ನು ಹುಡುಕುತ್ತಾ ಜಗತ್ತನ್ನು ಸುತ್ತುವ ಸ್ಯಾಂಟಿಯಾಗೋ ಇಲ್ಲಿನ ಪ್ರಮುಖ ಪಾತ್ರ. ನಾವು ಒಂದು ವಿಷಯವನ್ನು ಮನಸ್ಪೂರ್ತಿಯಾಗಿ ಬಯಸಿದರೆ, ಈ ಇಡೀ ಲೋಕವೇ ಆ ಬಯಕೆಯನ್ನು ಈಡೇರಿಸಲು ನಮ್ಮೊಂದಿಗೆ ನಿಲ್ಲುತ್ತದೆ ಎಂಬ ನಂಬಿಕೆಯನ್ನು ವಿಶ್ವದ ಓದುಗರಿಗೆ ನೀಡಿದ ಅಪರೂಪದ ರಚನೆ ಇದು. ಎಲ್ಲವನ್ನೂ ನೆನಪಿಸಿಕೊಂಡಾಗ ಮತ್ತೊಮ್ಮೆ ಓದೋಣ ಎಂದು ಭಾವಿಸಿ ಅವಳು ಪುಸ್ತಕವನ್ನು ತೆಗೆದುಕೊಂಡು ರೀಡಿಂಗ್ ಟೇಬಲ್‌ನತ್ತ ನಡೆದಳು. ನೂರ ಅಲ್ಲಿ ಟೇಬಲ್ ಮೇಲೆ ಏನನ್ನೋ ಓದುತ್ತಿದ್ದಳು. ಇಬ್ಬರೂ ಮುಖಾಮುಖಿಯಾಗಿ ಕುಳಿತುಕೊಳ್ಳುವಂತೆ ಆ ರೀಡಿಂಗ್ ಟೇಬಲ್‌ನಲ್ಲಿ ನೂರಳ ಎದುರು ಭಾಗದಲ್ಲಿ ಅವಳು ಹೋಗಿ ಕುಳಿತಳು. ಅವಳು ಅಲ್ಲಿ ಕುಳಿತದ್ದು ನೂರಳ ಗಮನಕ್ಕೆ ಬಂದಿಲ್ಲ ಎಂದು ತೋರುತ್ತದೆ. ಅವಳು ಗಂಭೀರವಾದ ಓದಿನಲ್ಲಿ ಮಗ್ನಳಾಗಿದ್ದಳು. ವೈಲೆಟ್ ಬಣ್ಣದ ಕವರ್ ಇರುವ ಸಾಕಷ್ಟು ದಪ್ಪನೆಯ ಪುಸ್ತಕವನ್ನು ಅವಳು ಓದುತ್ತಿದ್ದಳು. ಕುರ್ಚಿಯಲ್ಲಿ ಕುಳಿತ ನಂತರ ತಲೆಯನ್ನು ಸ್ವಲ್ಪ ಓರೆ ಮಾಡಿ ನೂರ ಓದುತ್ತಿದ್ದ ಪುಸ್ತಕದ ಹೆಸರನ್ನು ನೋಡಿದಳು. ಮಾರ್ಟಿನ್ ಲಿಂಗ್ಸ್ ಬರೆದ 'ಮುಹಮ್ಮದ್' ಎಂಬ ಪುಸ್ತಕವದು. ಅದು ಈ ಲೈಬ್ರರಿಯದ್ದಲ್ಲ. ಅವಳು ಮನೆಯಿಂದ ತಂದಿರಬೇಕು. ಏನೇ ಇರಲಿ, ತಾನು ಇಲ್ಲಿ ಬಂದು ಕುಳಿತ ವಿಷಯ ಅವಳಿಗೆ ತಿಳಿದಿಲ್ಲ. ಫರ್ಸಾನ ಗಂಟಲು ಸರಿಪಡಿಸಿಕೊಂಡಳು. ನೂರಾ ತಟ್ಟನೆ ತಲೆಯೆತ್ತಿ ಫರ್ಸಾನಳನ್ನು ನೋಡಿದಳು. ಅವಳು ಮೂಗು ಎಳೆದಳು, ದುಃಖಿತಳಾದಂತೆ ಕಂಡಳು.
"ನೀನೇನು ಅಳುತ್ತಿದ್ದೀಯಾ...?" ಫರ್ಸಾನ ಕುತೂಹಲದಿಂದ ಕೇಳಿದಳು.
"ಹೇಯ್... ಅತುಲ್ಯ ಎಲ್ಲಿದ್ದಾಳೆ...?" ನೂರಾ ಬೇಗನೆ ವಿಷಯ ಬದಲಿಸಿದಳು.
"ಅವಳು ವಾಷ್‌ರೂಮ್‌ಗೆ ಹೋಗಿದ್ದಾಳೆ" ಫರ್ಸಾನ ತನ್ನ ಕೈಯಲ್ಲಿದ್ದ ಪುಸ್ತಕದ ಕಡೆಗೆ ನೋಡಿ ಹೇಳಿದಳು. ನೂರಾ ಅಳುತ್ತಿದ್ದಾಳೆ ಎಂಬುದು ಫರ್ಸಾನಳಿಗೆ ಅರ್ಥವಾಗಿತ್ತು. ಸುಮ್ಮನೆ ಅಳುತ್ತಿಲ್ಲ ಎಂದು ಅವಳು ಹೇಳುತ್ತಿದ್ದಾಳೆ ಅಷ್ಟೇ.
"ಯಾವುದು ಆ ಪುಸ್ತಕ...?" ಅವಳು ನೂರಾಳ ಪುಸ್ತಕದತ್ತ ಬೆರಳು ಮಾಡಿ ಕೇಳಿದಳು.
"ಇದೋ... ಇದು ನಬಿ (ಪ್ರವಾದಿ) ಅವರ ಚರಿತ್ರೆ ಹೇಳುವ ಪುಸ್ತಕ. ಮಾರ್ಟಿನ್ ಲಿಂಗ್ಸ್ ಇದನ್ನು ಬರೆದಿದ್ದಾರೆ."
ಮುಂದುವರಿಯುವುದು......