"ಅಲಿ ಫಾತಿಮಾ" ಬಾಗ-06
"ಅಲಿ..., ಫಾತಿಮಾ ನಿನಗಾಗಿಯೇ ಇರುವವಳು."
Haneef Baqavi
6/30/20261 min read


Page 22
ಬಾಲ್ಯದಿಂದಲೇ ಅಂತ್ಯ ಪ್ರವಾದಿಯರ ಆತ್ಮೀಯ ಸಹಚಾರಿಯಾಗಿ ಅಲಿ (ರ) ರವರಲ್ಲಿ ಬಂದು ಸೇರಿದ ಜ್ಞಾನದ ಕಡಲು, ಮದೀನಾಕ್ಕೆ ಒಂದು ಪಠ್ಯಪುಸ್ತಕದಂತಾಯಿತು.
ದಿನಗಳು ಉರುಳಿದವು. ಸಂಕೀರ್ಣವಾದ ಬದ್ರ್ ಯುದ್ಧದ ಹಗಲು-ರಾತ್ರಿಗಳು ಎದುರಾದವು. ವೀರ ಯೋಧ ಅಲಿ (ರ) ಅವರ ರೌದ್ರ ರೂಪಕ್ಕೆ ಬದ್ರ್ ರಣಾಂಗಣವು ಸಾಕ್ಷಿಯಾಯಿತು. ಮಕ್ಕಾದ ಶೂರ ಪರಾಕ್ರಮಿಗಳು ಸತ್ಯವಿಶ್ವಾಸದ ಶಿರಸ್ಸಿನ ಮೇಲೆ ಖಡ್ಗವನ್ನು ಎತ್ತಿ ಹಿಡಿದರು. ಅಹಂಕಾರದ ಅಟ್ಟಹಾಸವು ಮೊಳಗಿದ ಆ ದಿನದಂದು, ದೇವದೂತರು ಸತ್ಯವಿಶ್ವಾಸದ ಕೀರ್ತಿಪತಾಕೆಯನ್ನು ಎತ್ತಿಹಿಡಿಯಲು ರಣರಂಗಕ್ಕೆ ಕಳುಹಿಸಿಕೊಟ್ಟ ಅಪ್ರತಿಮ ಹೋರಾಟಗಾರನೇ ಅಲಿ (ರ). ಧರ್ಮಯುದ್ಧದಲ್ಲಿ ದೃಢವಿಶ್ವಾಸದ ಬಲದೊಂದಿಗೆ ಅಖಾಡಕ್ಕಿಳಿದ ಅಲಿ (ರ), ವಿಶ್ವಾಸಿಗಳ ವಿಜಯಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿದರು. ಪ್ರವಾದಿ ಎಂಬ ಜ್ಞಾನದ ಹೆಬ್ಬಾಗಿಲಾಗಿ, ಆಕ್ರಮಣಕಾರರ ಬೇಟೆಯ ಮುಂದೆ ಸತ್ಯವಿಶ್ವಾಸದ ರಕ್ಷಣಾ ಕವಚವಾಗಿ ಅಲಿ (ರ) ಎಂಬ ಯುವಕ ಎದ್ದು ನಿಂತರು.
ಬದ್ರ್ ಕದನದ ವಿಜಯವು ಮದೀನಾದಲ್ಲಿ ಆನಂದಬಾಷ್ಪವನ್ನು ಹರಿಸಿತು. ಹುಟ್ಟಿದ ನಾಡಿನಲ್ಲಿ ಕ್ರೂರವಾಗಿ ಹಿಂಸಿಸಿದವರು ಧೂಳೀಪಟವಾದದ್ದೇ ಬದ್ರ್ ನೀಡಿದ ಸಂದೇಶವಾಗಿತ್ತು. ಯುದ್ಧದ ನಂತರ ವಶಪಡಿಸಿಕೊಳ್ಳಲಾದ ಯುದ್ಧಾರ್ಜಿತ ಸೊತ್ತುಗಳನ್ನು ಹಂಚಲಾಯಿತು. ಒಂಟೆ ಮತ್ತು ಯುದ್ಧಕವಚವು ಅಲಿ (ರ) ಅವರಿಗೆ ಪಾಲಾಗಿ ಲಭಿಸಿತು. ಬದ್ರ್ ಯುದ್ಧವನ್ನು ಗೆದ್ದು ಮದೀನಾ ಗಣರಾಜ್ಯದ ನಾಯಕರಾಗಿ ಮೂಡಿಬಂದ ಅವರು ಅಜೇಯರಾಗಿದ್ದರು. ರಾಜನ ಮಗಳು ತೃಪ್ತಳಾಗಿದ್ದಳು. ಅಹಂಕಾರ ಅಥವಾ ಪ್ರದರ್ಶನ ಪ್ರಿಯತೆಯ ಲೇಶವೂ ಇಲ್ಲದೆ, ಅಧಿಕಾರವೆಂಬುದು ತನ್ನನ್ನು ತಾಗದಂತೆ ಜಗತ್ತಿನ ಅಹಂಕಾರಿಗಳ ಮುಂದೆ ಮದೀನಾದಿಂದ ಒಬ್ಬ ರಾಜ ಉದಯಿಸಿ ಬಂದಿದ್ದನು. ಆ ರಾಜನ ಪಾದಸ್ಪರ್ಶವು ಮರುಭೂಮಿಗೆ ಹೊಸದೊಂದು ಚೈತನ್ಯದ ಬಣ್ಣವನ್ನು ತುಂಬಿತು.
Page 23
ಪ್ರೇಮವು ಅರಳಿದಾಗ...
ದೂರದ ಮರುಭೂಮಿಯ ಮಡಿಲಲ್ಲಿ ಮದೀನಾ ಎಂಬೊಂದು ನಗರವಿತ್ತು. ಮಧುರವಾಗಿ ಅರಳಿದ ಖರ್ಜೂರದ ಮರಗಳೂ, ಹೃದಯವನ್ನು ಹಂಚಿಕೊಂಡು ಬದುಕುವ ಪ್ರೀತಿಯ ತಂಗಾಳಿಯನ್ನು ಮನಸ್ಸಿಗೆ ತುಂಬುವ ಮನುಷ್ಯರೂ ನೆಲೆಸಿದ ಸ್ನೇಹದ ನಾಡದು. ಆ ನಾಡಿನಲ್ಲಿ ಹಸುಳೆಗೂ ಕಲ್ಲಿಗೂ, ಗಂಡಿಗೂ ಹೆಣ್ಣಿಗೂ, ದಾಸನಿಗೂ ಯಜಮಾನನಿಗೂ, ಕಪ್ಪಗೂ ಬಿಳ್ಳಗೂ ಅತ್ಯಂತ ಪ್ರೀತಿಪಾತ್ರರಾದ ಒಬ್ಬ ರಾಜನಿದ್ದನು. ಆ ರಾಜನ ತದ್ರೂಪದಂತಿದ್ದ ಒಬ್ಬಾಕೆ ಮಗಳಿದ್ದಳು; ಅವಳೇ ಫಾತಿಮಾ.
ಮುಖಭಾವದಲ್ಲಿ, ನಡಿಗೆಯಲ್ಲಿ, ವರ್ಣದಲ್ಲಿ ಎಲ್ಲದರಲ್ಲೂ ಅವಳು ತನ್ನ ತಂದೆಯದೇ ಪ್ರತಿರೂಪವೆಂದು ಆ ನಾಡಿನ ಜನರೆಲ್ಲರೂ ಕೊಂಡಾಡುತ್ತಿದ್ದರು. ಬಾಲ್ಯದಿಂದಲೇ ತಂದೆಯ ಜೊತೆಜೊತೆಯಾಗಿ ಹೆಜ್ಜೆಯಿಟ್ಟ ಅವಳು, ದಿನಚರಿಯಲ್ಲೂ ನಡವಳಿಕೆಯಲ್ಲೂ ಅಷ್ಟೇ ಶಿಸ್ತನ್ನು ಕಾಯ್ದುಕೊಂಡಿದ್ದಳು. ಆ ತಂದೆ ಮತ್ತು ಮಗಳ ನಡುವೆ ಎಂದಿಗೂ ಬೇರ್ಪಡಿಸಲಾಗದ ಅನನ್ಯವಾದೊಂದು ಬಂಧವಿತ್ತು. ತಂದೆಯ ಸಂಕಟಗಳಿಗೆ ಮಗಳು ಹೆಗಲಾಗುತ್ತಿದ್ದರೆ, ಮಗಳ ದುಃಖಗಳಲ್ಲಿ ತಂದೆ ಸಾಂತ್ವನದ ಆಸರೆಯಾಗುತ್ತಿದ್ದರು. ಆ ಸ್ನೇಹದ ಮಳೆಯನ್ನು ಕಣ್ಣಾರೆ ಕಂಡವರೆಲ್ಲರೂ, "ಇಂತಹದೊಂದು ತಂದೆ-ಮಗಳ ಜೋಡಿಯನ್ನು ನೋಡಲು ಸಾಧ್ಯವೇ!" ಎಂದು ಆಶ್ಚರ್ಯದಿಂದ ಮಾತನಾಡಿಕೊಳ್ಳುತ್ತಿದ್ದರು.
ಫಾತಿಮಾ ಅವರಿಗೆ ಈಗ ಹದಿನೆಂಟು ವರ್ಷ ತುಂಬಿತ್ತು. ವಿವಾಹದ ಪ್ರಾಯವು ಒದಗಿಬಂದಿತ್ತು. ಪ್ರವಾದಿಯವರ ಪ್ರೀತಿಯ ಪುತ್ರಿಯನ್ನು ತನ್ನದಾಗಿಸಿಕೊಳ್ಳಲು ಅನೇಕ ಗಣ್ಯರು ಹಂಬಲಿಸಿದರು. ಆತ್ಮೀಯ ಸಹಚಾರಿಯಾಗಿದ್ದ ಅಬೂಬಕರ್ (ರ) ಅವರು ಮೊದಲು ವಿವಾಹದ ಪ್ರಸ್ತಾಪವನ್ನು ಮುಂದಿಟ್ಟರು. ಆದರೆ, "ಅಲ್ಲಾಹನ ಆದೇಶವು ಲಭಿಸಿಲ್ಲ" ಎಂದು ಪ್ರವಾದಿಯವರ ಪ್ರತ್ಯುತ್ತರವಾಗಿತ್ತು. ನಂತರ ಉಮರ್ (ರ) ಅವರಲ್ಲೂ ಈ ಆಸೆ ಮೂಡಿತು. ಸಂಪನ್ನರಾದ ಅಬ್ದುರ್ರಹ್ಮಾನ್ ಬಿನ್ ಔಫ್ ಸೇರಿದಂತೆ ಪ್ರಮುಖರೆಲ್ಲರೂ ಫಾತಿಮಾ ಅವರ ವಿವಾಹದ ಆಲೋಚನೆಯೊಂದಿಗೆ ಪ್ರವಾದಿಯವರ ಸನ್ನಿಧಿಗೆ ಬಂದರು. ಆದರೆ ಅಂತ್ಯ ಪ್ರವಾದಿಯವರು ಯಾರಿಗೂ ಒಪ್ಪಿಗೆಯನ್ನು ನೀಡಿರಲಿಲ್ಲ. ದಿನಗಳು ಉರುಳಿದಂತೆ ಫಾತಿಮಾ ಅವರಿಗಾಗಿ ಬರುತ್ತಿದ್ದ ಕಲ್ಯಾಣದ ಆಲೋಚನೆಗಳ ಕುರಿತು
Page 24
ಚರ್ಚೆಯಾಗುತ್ತಿದ್ದ ವಾರ್ತೆಯು ಅಲಿ (ರ) ಅವರ ಕಿವಿಗೆ ಬಿತ್ತು. ನೇರವಾಗಿ ಹೋಗಿ ಪ್ರವಾದಿಯವರಲ್ಲಿ ತನ್ನ ಇಚ್ಛೆಯನ್ನು ಕೇಳುವಂತೆ ಅಬೂಬಕರ್ (ರ) ಮತ್ತು ಉಮರ್ (ರ) ಅವರು ಅಲಿ ಅವರಿಗೆ ಧೈರ್ಯ ತುಂಬಿದರು.
ಬಾಲ್ಯದಿಂದಲೇ ಒಟ್ಟಿಗೆ ಬೆಳೆದು, ತಾನು ಅತ್ಯಂತ ಆರಾಧಿಸುತ್ತಿದ್ದ ಪ್ರವಾದಿಯವರ ಪುತ್ರಿಗೆ ಪತಿಯಾಗಬೇಕೆಂಬ ಹಂಬಲವು ಅಲಿ ಅವರ ಮನಸ್ಸಿನಲ್ಲೂ ಮೊಳಕೆಯೊಡೆಯಿತು.
ಮಾತನಾಡಲು ಮನಸ್ಸನ್ನು ದೃಢಪಡಿಸಿಕೊಂಡ ಅಲಿ (ರ) ಪ್ರವಾದಿಯವರ ಸನ್ನಿಧಿಗೆ ತಲುಪಿದರು. ಸಲಾಮ್ ಹೇಳಿ, ಪ್ರವಾದಿಯವರ ಮುಂದೆ ಪರಮ ಗೌರವದಿಂದ ತಲೆ ತಗ್ಗಿಸಿ ನಿಂತರು. "ಯಾವ ವಿಷಯಕ್ಕಾಗಿ ಬಂದೆ?" ಎಂಬ ಪ್ರವಾದಿಯವರ ಪ್ರಶ್ನೆಯ ಮುಂದೆ, ತಕ್ಷಣ ಉತ್ತರ ನೀಡಲಾಗದೆ, ಏನೂ ಹೇಳಲಾಗದ ಸ್ಥಿತಿಯಲ್ಲಿ ಅಲಿ (ರ) ಮೌನವಾಗಿ ತಲೆತಗ್ಗಿಸಿ ನಿಂತುಕೊಂಡರು. ಆ ಕ್ಷಣದ ನಿಶ್ಯಬ್ದತೆಯನ್ನು ಗ್ರಹಿಸಿದ ಪ್ರವಾದಿ (ಸ) ಅವರು ವಿಷಯವೇನೆಂದು ಅರ್ಥಮಾಡಿಕೊಂಡರು.
ಯಾವುದೇ ಬಲವಾದ ಕಾರಣವಿಲ್ಲದೆ ನನ್ನ ಅಲಿ ಈ ರೀತಿ ಬಂದು ನಿಲ್ಲಲು ಸಾಧ್ಯವಿಲ್ಲ ಎಂದು ಭಾವಿಸಿದ ಪ್ರವಾದಿಯವರು, "ಫಾತಿಮಾಳ ವಿಷಯವೇ?" ಎಂದು ಕೇಳಿದರು.
ಮೌನವು ಮುರಿಯಿತು, ಧ್ವನಿಯು ನಡುಗಿತು, ಆಲೋಚನೆಗಳು ರೆಕ್ಕೆ ಬಿಚ್ಚಿದವು. ಅಂತ್ಯ ಪ್ರವಾದಿಯವರ ಉತ್ತರಾಕಾಂಕ್ಷಿಯಾಗಿ ಅಲಿ (ರ) ಕಾತರದಿಂದ ಕಾಯುತ್ತಿದ್ದರು.
ಹಲವಾರು ಗಣ್ಯರಿಗೆ ಒಲಿದುಬರದ ಸೌಭಾಗ್ಯವು, ನಿರಾಶೆಯ ಕಹಿಯಾಗಿ ತನ್ನ ಕಿವಿಯ ಮೇಲೂ ಬೀಳಬಹುದೇ? ಸಂಪನ್ನರೆಲ್ಲರೂ ಸೋತುಹೋದ ಈ ದೌತ್ಯದಲ್ಲಿ, ಪ್ರವಾದಿಯವರು ಬಡವನಾದ ನನ್ನನ್ನು ಆರಿಸಿಕೊಳ್ಳುವರೇ?
ಅಂತ್ಯ ಪ್ರವಾದಿಯವರ ಪ್ರೀತಿಯ ಪುತ್ರಿಗೆ ಪತಿಯಾಗುವ ಸೌಭಾಗ್ಯವು ನನಗೆ ಲಭಿಸುವುದೇ?
ಹೃದಯದ ಬಡಿತ ಹೆಚ್ಚಾಗಿದ್ದ ಆ ಕ್ಷಣಗಳಿಗೆ ವಿರಾಮ ಹಾಡುತ್ತಾ ಪ್ರವಾದಿ (ಸ) ಅವರು ಉತ್ತರಿಸಿದರು:
"ಅಲಿ..., ಫಾತಿಮಾ ನಿನಗಾಗಿಯೇ ಇರುವವಳು."
ಅಂದು ಅಲಿಯರಿಗಿಂತಲೂ ಹೆಚ್ಚು ಸಂತೋಷಪಟ್ಟ ಮನುಷ್ಯ ಬೇರೊಬ್ಬನಿದ್ದಿರಲಾರ. ಮಗಳ ಸಮ್ಮತಿಯೇ ಪ್ರವಾದಿಯವರಿಗೆ ಅತ್ಯಂತ ಪ್ರಧಾನವಾಗಿತ್ತು.
ಅವರು ಫಾತಿಮಾ (ರ) ಅವರ ಬಳಿಗೆ ತೆರಳಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಮುಂದುವರಿಯುವುದು.....