"ಅಲಿ ಫಾತಿಮಾ" ಬಾಗ-05
ಪ್ರವಾದಿಯವರ ಕುತ್ತಿಗೆ ಸೀಳಲು ಕಾಯುತ್ತಿದ್ದವರ ಕಣ್ಣೆದುರಿನಿಂದಲೇ ಪ್ರವಾದಿ (ಸ) ಅವರು ಮದೀನಾದತ್ತ ಸಾಗಿದರು
ಅಲಿ ಫಾತಿಮಾ
Haneef Baqavi
6/30/20261 min read


Page 19
ಫಾತಿಮಾಳಿಗೆ ಇನ್ನೂ ಹದಿನೈದು ವರ್ಷ ತುಂಬಿರಲಿಲ್ಲ. ತಾಯಿ ಖದೀಜಾ ಬೀವಿಯವರ ಅಗಲಿಕೆಯು ಫಾತಿಮಾ ಬೀವಿಯವರಲ್ಲಿ ಅನಾಥತ್ವದ ತೀವ್ರ ವೇದನೆಯನ್ನು ಮೂಡಿಸಿತ್ತು.
ಮುಂದಿನ ದಿನಗಳಲ್ಲಿ ಕಾಲದ ಕರ್ತವ್ಯವನ್ನು ಹೆಗಲಿಗೇರಿಸಿಕೊಂಡು, ಅಂತ್ಯ ಪ್ರವಾದಿಯರಿಗೆ ನೆರಳಾಗಲು ಅವರ ಹೃದಯದ ತುಣುಕಾದ ಆ ಮಗಳು ಸದಾ ಸರ್ವದಾ ಶ್ರಮಿಸಿದಳು. ತಾಯಿಯಿಂದ ಕಲಿತ ಪಾಠಗಳ ಒಂದೊಂದೇ ಕಣಗಳನ್ನು ಪ್ರವಾದಿಯವರ ಮೇಲೆ ಪ್ರೀತಿಯ ಹನಿಗಳಾಗಿ ವರ್ಷಿಸಿದಳು. ಎಲ್ಲ ಸಂಕಟಗಳನ್ನು ಆಲಿಸಿ, ಸಾಂತ್ವನದ ನುಡಿಗಳನ್ನಾಡುತ್ತಾ ಫಾತಿಮಾ ಬೀವಿ ಪ್ರವಾದಿಯವರ ಹೃದಯ ತುಂಬಿಕೊಂಡಳು.
ಅದೇ ಸಮಯದಲ್ಲಿ ಪ್ರವಾದಿಯವರ ಆತ್ಮೀಯ ಸಹಚಾರಿಯಾಗಿ, ಜ್ಞಾನದ ಕಡಲಿನಿಂದ ಮುತ್ತುಗಳನ್ನು ಆರಿಸುತ್ತಿದ್ದರು ಅಲಿ (ರ).ಅಪ್ರತಿಮ ಯೋಧನಾಗಿ ಬೆಳೆದರು. ಜೀವನದ ಎಲ್ಲಾ ಘಟ್ಟಗಳಲ್ಲೂ ತ್ಯಾಗಭರಿತ ಆಂದೋಲನಗಳಿಗೆ ಮುಂಚೂಣಿಯಲ್ಲಿ ನಿಲ್ಲಲು ಪ್ರವಾದಿಯವರ ಅತ್ಯಂತ ನಂಬಿಕಸ್ಥರಾಗಿ ಅಲಿ (ರ) ಅವರೇ ಸದಾ ಮುಂದೆ ನಿಲ್ಲುತ್ತಿದ್ದರು.
ಮದೀನಾದ ಕಡೆ ಪ್ರವಾದಿ (ಸ) ಅವರು ಪಲಾಯನ ಮಾಡಲು ಸಿದ್ಧರಾದಾಗ, ಶತ್ರುಗಳು ಹೂಡಿದ್ದ ಸಂಚಿನ ಜಾಲವನ್ನು ಭೇದಿಸಲು ಪ್ರವಾದಿಯವರ ಹಾಸಿಗೆಯ ಮೇಲೆ ಅವರ ಬದಲಾಗಿ ಮಲಗಿದ್ದು ಇದೇ ಅಲಿ (ರ) ಆಗಿದ್ದರು.
ತನ್ನ ತಂದೆಯ ಮೇಲೆ ಆಕ್ರಮಣ ಮಾಡಿದವರ ವಿರುದ್ಧ ಬಾಲ್ಯದಲ್ಲೇ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ ಆ ಹೆಣ್ಣುಮಗಳನ್ನು ಮಕ್ಕಾದ ಜನರಿಗೆ ಚೆನ್ನಾಗಿ ತಿಳಿದಿತ್ತು. ಕಅಬಾದ ಬಳಿ ನಮಾಝಿನಲ್ಲಿ ತೊಡಗಿದ್ದ ಪ್ರವಾದಿಯವರನ್ನು ಅಬೂ ಜಹಲ್ ಮತ್ತು ಅವನ ಗುಂಪು ಆಕ್ರಮಿಸಿದಾಗ, ಅದನ್ನು ನೋಡಿ ಅಟ್ಟಹಾಸದಿಂದ ನಕ್ಕ ದಿನದಂದು, ಆ ಪ್ರಕ್ಷುಬ್ಧ ಭೂಮಿಗೆ ಧಾವಿಸಿ ಬಂದಿದ್ದ ಬಾಲ್ಯದ ಕೆಂಪೇರಿದ್ದ ಮುಖದ ಫಾತಿಮಾ, ಮಕ್ಕಾದ ಅತಿ ಪ್ರಭಾವಶಾಲಿಯಾಗಿದ್ದ ಅಬೂ ಜಹಲನಿಗೆ ನೇರವಾಗಿಯೇ ಸವಾಲು ಹಾಕಿ ಎದುರಿಸಿದ್ದಳು. ನಿರ್ಭಯತೆಯನ್ನು ಪ್ರದರ್ಶಿಸಿದ ಆ ಬಾಲಕಿಯ ಮುಂದೆ, ಮಕ್ಕಾದ ಕ್ರೂರಿಗಳ ಅಹಂಕಾರವೂ ಸಹ ನಡುಗಿಹೋದ ದಿನವನ್ನು ಇತಿಹಾಸದಲ್ಲಿ ಕಾಣಬಹುದು.
ಉತ್ತಮ ದಾಂಪತ್ಯದ ಒಲವಿನ ಬಣ್ಣವನ್ನು ಕಂಡು ಬೆಳೆದವರು, ಪ್ರೀತಿ ಮತ್ತು ಕರುಣೆಯ ಪರ್ಯಾಯ ರೂಪಗಳಾಗಿದ್ದರು. ಕಠಿಣವಾದ ಹಗಲು-ರಾತ್ರಿಗಳ ತ್ಯಾಗವನ್ನು ಸಹಿಸಿಕೊಳ್ಳುವ ಮನೋಭಾವ ಬಾಲ್ಯದಲ್ಲೇ ಅವರಲ್ಲಿ ಪಕ್ವಗೊಂಡಿತ್ತು.
ಕಾಲ ಉರುಳಿದಂತೆ ಮಕ್ಕಾ ನಗರವು ಅವರಿಗೆ ಕಪ್ಪಾದ...
Page 20
ನೆನಪುಗಳನ್ನೇ ಉಡುಗೊರೆಯಾಗಿ ನೀಡುತ್ತಾ ಬಂತು. ತಾಯಿಯ ವಿಯೋಗ ಮತ್ತು ತಂದೆಯ ವಿರುದ್ಧ ಸಮಾಜವು ಹರಿಸುತ್ತಿದ್ದ ಆಕ್ರಮಣಗಳು, ಹದಿಹರೆಯದ ಆ ಹೆಣ್ಣುಮಗಳಿಗೆ ಅಶಾಂತಿಯ ದಿನಗಳನ್ನು ತಂದಿಟ್ಟವು. ಅಲ್ಲಿ ತಂದೆಯು ದೃಢವಾಗಿ ಬೋಧಿಸಿದ ಅಲ್ಲಾಹನು ಅವಳಿಗೆ ಆಸರೆಯಾಗಿದ್ದನು. ಆ ಹದಿಹರೆಯದ ಪ್ರಾಯದಲ್ಲೇ ಅಲ್ಲಾಹನ ಮೇಲಿನ ಅಚಲವಾದ ವಿಶ್ವಾಸವು ಅವಳಲ್ಲಿ ಗಟ್ಟಿಯಾಯಿತು. ಆ ನಂಬಿಕೆಯು ಅವಳಿಗೆ ಸಾಟಿಯಿಲ್ಲದ ಧೈರ್ಯ ಮತ್ತು ನಿರ್ಭಯತೆಯನ್ನು ಪ್ರಸಾದಿಸಿತು.
ಆಕ್ರಮಣದ ತೀವ್ರತೆ ಹೆಚ್ಚಾದಾಗ, ಹುಟ್ಟಿದ ನಾಡನ್ನು ತೊರೆದು ವಲಸೆ ಹೋಗುವುದೇ ವಿಧಿಯ ಬರಹವಾಯಿತು. ತಾಯಿಯ ನೆನಪುಗಳು ಹಸಿರಾಗಿರುವ ನಾಡು, ಬಾಲ್ಯದಲ್ಲಿ ಆಡಿ ನಲಿದ ಮರ್ವಾ ಬೆಟ್ಟಗಳು, ದೇವದೂತ ಜಿಬ್ರೀಲ್ (ಅ) ಅವರು ಬರುತ್ತಿದ್ದ ದಿನಗಳಲ್ಲಿ ತಂದೆಯನ್ನು ತಾಯಿ ಅಪ್ಪಿ ಹಿಡಿಯುತ್ತಿದ್ದ ಮನೆ; ಎಲ್ಲವನ್ನೂ ತೊರೆದು ಒಂದು ಸುದೀರ್ಘ ಯಾನ ಕೈಗೊಳ್ಳಬೇಕಾಯಿತು. ಆ ಎಳೆ ಮನಸ್ಸಿನಲ್ಲಿ ವೇದನೆಯ ಅಲೆಗಳು ಎದ್ದವು. ತಾಯಿ ಮಲಗಿರುವ ಆ ಮಣ್ಣು ಆ ಹದಿಹರೆಯದ ಬಾಲಕಿಗೆ ಅಷ್ಟರಮಟ್ಟಿಗೆ ಭಾವುಕ ಭಾವನೆಗಳನ್ನು ಮೂಡಿಸಿತ್ತು.
ಅದು ಜೀವಿಸಲು ಹೊರಟ ಪಲಾಯನ. ಸತ್ಯವಿಶ್ವಾಸವನ್ನು ಸ್ವೀಕರಿಸಿದ ಕಾರಣಕ್ಕಾಗಿ ಮಕ್ಕಾದ ಮುಸ್ಲಿಮರು ಗುಂಪು ಗುಂಪಾಗಿ ಮದೀನಾದಲ್ಲಿ ಜೀವಿಸಲು ವಲಸೆ ಹೋಗುತ್ತಿದ್ದರು.
ದಿನಗಳ ಕಾಲ ಸಾಗುವ ಸುದೀರ್ಘ ಪ್ರಯಾಣ. ಬಹುತೇಕ ವಿಶ್ವಾಸಿಗಳು ಮಕ್ಕಾವನ್ನು ತೊರೆದಿದ್ದರು. ಪ್ರವಾದಿ (ಸ) ಅವರ ಕುಟುಂಬ ಹಾಗೂ ಅಬೂಬಕರ್ (ರ) ಅವರ ಕುಟುಂಬ ಮಾತ್ರ ಇನ್ನು ಮಕ್ಕಾದಲ್ಲಿ ಉಳಿದುಕೊಂಡಿತ್ತು.
ಮದೀನಾಕ್ಕೆ ತಲುಪುವ ಮುನ್ನವೇ ಪ್ರವಾದಿಯವರ ಕಥೆ ಮುಗಿಸಲು ಖುರೈಷಿಗಳು ದೃಢ ನಿರ್ಧಾರ ಮಾಡಿದ್ದರು. ಮಕ್ಕಾ ನಗರವು ಅಲೌಕಿಕ ದೃಶ್ಯಗಳ ಮಹಾಮಳೆಯನ್ನೇ ಕಂಡಿತು. ಪ್ರವಾದಿಯವರ ಕುತ್ತಿಗೆ ಸೀಳಲು ಕಾಯುತ್ತಿದ್ದವರ ಕಣ್ಣೆದುರಿನಿಂದಲೇ ಪ್ರವಾದಿ (ಸ) ಅವರು ಮದೀನಾದತ್ತ ಸಾಗಿದರು. ಅಲ್ಲಿಯವರೆಗೆ ತಂದೆಯನ್ನು ಅಗಲಿರದ ಫಾತಿಮಳ ಮನಸ್ಸಿನಲ್ಲಿ ಆತಂಕದ ಕಾರ್ಮೋಡಗಳು ಕವಿದವು. ಕಠಿಣವಾದ ಆ ಪ್ರಯಾಣದಲ್ಲಿ ತನ್ನ ತಂದೆಯನ್ನು ಶತ್ರುಗಳು ಆಕ್ರಮಿಸಿರಬಹುದೇ? ಆ ಬಿಕ್ಕಟ್ಟಿನ ಸಂದರ್ಭಗಳಲ್ಲಿ ತಾಯಿ ಮತ್ತು ತಂದೆ ತನಗೆ ಹೇಳಿಕೊಟ್ಟ ಮಾತುಗಳಲ್ಲಿ ಫಾತಿಮಾ ಆಶ್ರಯವನ್ನು ಕಂಡುಕೊಂಡಿರಬೇಕು: "ತಂದೆಯು ಸತ್ಯಸಂಧರಾಗಿದ್ದಾರೆ, ಅಲ್ಲಾಹನು ಖಂಡಿತವಾಗಿಯೂ ರಕ್ಷಿಸುತ್ತಾನೆ."
ಫಾತಿಮಾ ಮತ್ತು ಅವರ ಕುಟುಂಬವನ್ನು ಮದೀನಾಕ್ಕೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಝೈದ್ (ರ) ಅವರ ಮೇಲಿತ್ತು. ಒಂಟೆಗಳು ಮತ್ತು ಪ್ರಯಾಣದ ವೆಚ್ಚಕ್ಕಾಗಿ ಬೇಕಾದ ಹಣವನ್ನು ಪ್ರವಾದಿಯವರು ಪ್ರಯಾಣಕ್ಕೆ ಮುನ್ನವೇ ಝೈದ್ ಅವರ ವಶಕ್ಕೆ ಒಪ್ಪಿಸಿದ್ದರು.
Page no 21
ಅಲಿ (ರ) ಅವರ ತಾಯಿ ಫಾತಿಮಾ ಮತ್ತು ಸಹೋದರಿಯರೊಂದಿಗೆ, ಝೈದ್ (ರ) ಅವರ ರಕ್ಷಣೆಯಲ್ಲಿ ಫಾತಿಮಾ (ರ) ಅವರು ತಾನು ಹುಟ್ಟಿದ ನಾಡನ್ನು ತೊರೆದು ವಲಸೆ ಹೋಗಲು ಸಿದ್ಧರಾದರು. ಆ ಪ್ರಯಾಣವೂ ಸಹ ಅವರಿಗೆ ನೋವಿನ ಅನುಭವಗಳನ್ನೇ ನೀಡಿತು. ದಾರಿಯ ಮಧ್ಯೆ ಫಾತಿಮಾ ಮತ್ತು ಅವರ ತಂಡದ ಮೇಲೆ ಖುರೈಷಿಗಳು ಆಕ್ರಮಣ ಮಾಡಿದರು. ಒಂಟೆಯ ಕುತ್ತಿಗೆ ಕತ್ತರಿಸಿ ಅದನ್ನು ಎರಡು ತುಂಡು ಮಾಡಿದರು. ಆಯುಧಗಳ ದಾಳಿಗೆ ಸಿಲುಕಿ ಅವರು ಸಂಕಷ್ಟಕ್ಕೀಡಾದರು. ಆ ಸಮಯದಲ್ಲಿ ಝೈದ್ (ರ) ಅವರ ಸೂಚನೆಯಂತೆ ಫಾತಿಮಾ (ರ) ಮತ್ತು ಅವರ ಜೊತೆಯಲ್ಲಿದ್ದವರು ಓಡಿ ಬಚಾವಾದರು. ದಾರಿ ಮಧ್ಯೆ ಕುಟುಂಬದ ಮೇಲೆ ದಾಳಿಯಾದ ವಿಷಯವನ್ನು ತಿಳಿದ ಪ್ರವಾದಿ (ಸ) ರಿಗೆ ತೀವ್ರ ನೋವುಂಟಾಯಿತು. ಫಾತಿಮಾ ಬೀವಿಯವರನ್ನು ಅಗಲಿರುವುದು ಆ ತಂದೆಯ ಹೃದಯದಲ್ಲೂ ತೀವ್ರ ನೋವನ್ನು ಉಂಟುಮಾಡುತ್ತಿತ್ತು. ದಿನಗಳ ಕಾಲ ಅಂತ್ಯ ಪ್ರವಾದಿಯವರು ತಮ್ಮ ಮಗಳು ಫಾತಿಮಾ (ರ) ಅವರಿಗಾಗಿ ಕಾಯುತ್ತಿದ್ದರು. ಅವರಿಗಾಗಿ ಮದೀನಾದಲ್ಲಿ ಸಕಲ ಸೌಕರ್ಯಗಳನ್ನು ಸಿದ್ಧಪಡಿಸಲಾಗಿತ್ತು. ದಿನಗಳ ಬಳಿಕ ತೀವ್ರವಾಗಿ ದಣಿದಿದ್ದ ಅವರು ಮದೀನಾವನ್ನು ತಲುಪಿದರು. ಆ ಭೇಟಿಯು ಮದೀನಾಕ್ಕೆ ಅತ್ಯಂತ ಸುಂದರವಾದ ದೃಶ್ಯವಾಗಿತ್ತು. ಹೃದಯವನ್ನು ಹಂಚಿಕೊಂಡು ಬೆಳೆದ ತಂದೆ ಮತ್ತು ಮಗಳ ಆ ಪ್ರೀತಿಯ ಪ್ರದರ್ಶನದ ಮುಂದೆ, ಶಾಂತಿಯ ಆ ನಗರವು ಆನಂದಬಾಷ್ಪವನ್ನು ಹರಿಸಿತು.
ಅದು ಪ್ರೀತಿಯಿರುವ ಒಂದು ನಾಡಾಗಿತ್ತು. ಕಲ್ಲೆಸೆತಗಳು, ದಾರಿಯಲ್ಲಿ ಮುಳ್ಳುಗಳನ್ನು ಹರಡುವುದು ಹಾಗೂ ನಿಂದನೆಗಳ ಮೂಲಕ ತನ್ನ ತಂದೆಯನ್ನು ಮಕ್ಕಾದ ನೆರೆಹೊರೆಯವರು ನೋಯಿಸುವುದನ್ನು ಫಾತಿಮಾ ಕಂಡಿದ್ದಳು. ಆ ಪುಟ್ಟ ಮನಸ್ಸಿನಲ್ಲಿ ಆ ದೃಶ್ಯಗಳು ತೀವ್ರ ವೇದನೆಯನ್ನು ಉಂಟುಮಾಡಿದ್ದವು. ಆದರೆ ಪ್ರೀತಿಯ ಆ ನಗರದಲ್ಲಿ ಆ ಕಹಿ ದೃಶ್ಯಗಳೆಲ್ಲವೂ ಮಾಯವಾಗಿದ್ದವು. ತನಗಿದ್ದ ಎಲ್ಲವನ್ನೂ ತನ್ನ ತಂದೆ ಹಾಗೂ ಅವರ ಅನುಯಾಯಿಗಳಿಗಾಗಿ ಹಂಚಿಕೊಟ್ಟು ಮದೀನಾ ಸಾಗಿತ್ತು. ತನ್ನ ತಂದೆಯನ್ನು ಅಪಾರವಾಗಿ ಪ್ರೀತಿಸುವ, ಶ್ರದ್ಧೆಯಿಂದ ಉಪಚರಿಸುವ ಅಲ್ಲಿನ ನೆರೆಹೊರೆಯವರು ಆ ಬಾಲಕಿಯಲ್ಲಿ ಸುರಕ್ಷಿತತೆಯ ಹಾಗೂ ಪ್ರೀತಿಯ ಹೊಸ ಅಧ್ಯಾಯಗಳನ್ನು ತುಂಬಿದರು. ಅಲ್ಲಿ ವಿಶ್ವಾಸದ, ಮಾನವೀಯತೆಯ ಹಾಗೂ ನೈತಿಕ ಕ್ರಾಂತಿಯ ಅರಳುವಿಕೆಯನ್ನು ಆ ಬಾಲಕಿ ಕಣ್ಣುಂಬ ಕಂಡಳು. ದೈವಿಕ ಸಂದೇಶವಾಹಕರಿಂದ ಜ್ಞಾನವನ್ನು ಸಂಪೂರ್ಣವಾಗಿ ಗ್ರಹಿಸಿದಳು, ಕಲಿತದ್ದನ್ನೆಲ್ಲಾ ಜೀವನದಲ್ಲಿ ಅಳವಡಿಸಿಕೊಂಡಳು. ಮಧ್ಯರಾತ್ರಿಯಲ್ಲಿಅಲ್ಲಾಹನಿಗಾಗಿ ಸುಜೂದಿನಲ್ಲಿ ತೊಡಗುತ್ತಿದ್ದ ತಂದೆಯನ್ನು ಕಂಡು ಬೆಳೆದ ಆ ಬಾಲಕಿ ಭಕ್ತಿಗೆ ಪರ್ಯಾಯ ರೂಪದಂತಿದ್ದ ಜ್ಞಾನಿಯಾಗಿದ್ದಳು. ಪವಿತ್ರ ಪ್ರವಾದಿಯವರ ಅತ್ಯಂತ ಪ್ರೀತಿಯ ಪುತ್ರಿಯಾಗಿದ್ದಳು.
ಮಕ್ಕಾದ ಮರುಭೂಮಿಯಲ್ಲಿ ಖುರೈಷಿಗಳು ಪ್ರವಾದಿಯವರಿಗಾಗಿ ಹೂಡಿದ್ದ ಸಂಚಿನ ಜಾಲದಲ್ಲಿ ಸಿಲುಕದಂತೆ ರಕ್ಷಿಸಿದ ಅಲಿ ಹೈದರರ ವೀರಗಾಥೆಗಳು ಮದೀನಾದಲ್ಲೂ ವ್ಯಾಪಿಸಿದವು.
ಮುಂದುವರಿಯುವುದು.....